ಬೆಂಗಳೂರು, ಜು 04 (Daijiworld News/MSP): ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ವೃದ್ದಿಸಲು , ಕಂಠಪಾಠ ತಪ್ಪಿಸಿ, ತಾರ್ಕಿಕ ಚಿಂತನೆಯನ್ನು ಬೆಳೆಸಲು ಈ ವರ್ಷದಿಂದಲೇ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡಿ ಹೊಸ ಮಾದರಿ ಪ್ರಶ್ನೆ ಪತ್ರಿಕೆ ಜಾರಿ ಮಾಡಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಿರ್ಧಾರ ಮಾಡಿದೆ. ಅಲ್ಲದೆ ಪ್ರಸಕ್ತ ವರ್ಷದಿಂದಲೇ ನೂತನ ಪ್ರಶ್ನೆ ಪತ್ರಿಕೆ ಮಾದರಿ ಚಾಲನೆ ನೀಡಿದೆ.
ಹೀಗಾಗಿ ಶಾಲಾ ಶಿಕ್ಷಕರ ಮೇಲೆ ಹೆಚ್ಚಿನ ಹೊಣೆ ಬಿದ್ದಿದ್ದು, ಈ ಮಾದರಿಯ ಪ್ರಶ್ನೆಗಳನ್ನು ಎದುರಿಸಲೆಂದು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾದ ಅನಿವಾರ್ಯತೆ ಇದೆ. ಕೌಶಲ್ಯ ಹಾಗೂ ವಿವರಣಾತ್ಮಕ ಹೊಂದಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಹೆಚ್ಚಿನ ಒತ್ತು ನೀಡಿ, ಪ್ರಶ್ನೆಗಳ ಸಂಖ್ಯೆಗಳನ್ನು ಕಡಿಮೆ ಮಾಡಿ, ಕಠಿಣತೆಯ ಮಟ್ಟವನ್ನು ಎಲ್ಲಾ ವಿಷಯಗಳಲ್ಲೂ ಸಮಾನವಾಗಿ ರೂಪಿಸಿ, ಏಕ ರೂಪತರಲು ಮುಖ್ಯಾಂಶಾಧಾರಿತ/ವಿಷಯಾಧಾರಿತ ಅಂಕಗಳನ್ನು ಹಂಚಿಕೆ ಮಾಡಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮುಂದಾಗಿದೆ.
ಮುಂದಿನ ಮಾರ್ಚ್ ನಲ್ಲಿ ನಡೆಯಬೇಕಾಗುವ ಪರೀಕ್ಷೆಗೆ ಹೊಸ ರೀತಿಯ ಪ್ರಶ್ನೆಪತ್ರಿಕೆಗಳು ಸಿದ್ಧವಾಗಲಿವೆ.ಈ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆಯನ್ನು 40ರಿಂದ 38ಕ್ಕೆ ಕಡಿಮೆ ಮಾಡಲಾಗಿದೆ.
ಹೀಗಾಗಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು, ಉತ್ತರಗಳನ್ನು ಕಂಠಪಾಠ, ಬಾಯಿಪಾಠ ಮಾಡುವುದು ಬಿಟ್ಟು ತಮ್ಮ ಅಧ್ಯಯನ ವಿಧಾನದಲ್ಲೂ ಇದಕ್ಕೆ ತಕ್ಕಂತೆ ಮಾರ್ಪಾಡು ಮಾಡುವುದು ಒಳಿತು.