ಬೆಂಗಳೂರು, ಜು 04 (Daijiworld News/MSP): ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ನಿಖಿಲ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನವನ್ನ ನೀಡಿದ್ದಾರೆ. ಈ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ತಾತ ಹೆಚ್.ಡಿ ದೇವೇಗೌಡ ಕಾಲಿಗೆ ಬಿದ್ದು ನಿಖಿಲ್ ಆಶೀರ್ವಾದ ಪಡೆದುಕೊಂಡರು.
ಈವರೆಗೆ ಈ ಸ್ಥಾನವನ್ನು ಮಧುಬಂಗಾರಪ್ಪ ಅವರು ನಿಭಾಯಿಸುತ್ತಿದ್ದರು. ಈಗ ಮಧು ಬಂಗಾರಪ್ಪ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಯುವ ಘಟಕದ ಜವಾಬ್ದಾರಿ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಹೆಚ್. ವಿಶ್ವನಾಥ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸಕಲೇಶಪುರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಿಸಲಾಗಿದೆ.
ಯುವ ಘಟಕದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮಾತನಾಡಿದ ನಿಖಿಲ್, ನನಗೆ ಯುವ ಘಟಕದ ಜವಾಬ್ದಾರಿ ನೀಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಇಂದು ಬೆಳಗ್ಗೆಯಷ್ಟೇ ಈ ವಿಚಾರ ತಿಳಿಯಿತು. ಪಕ್ಷ ಸಂಘಟನೆ ಕಾರಣಕ್ಕೆ ನಾಯಕರು ಜವಾಬ್ದಾರಿ ನೀಡಿದ್ದಾರೆ. ತಾತಾ ದೇವೇಗೌಡರಂತೆ ಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದರು.