ಬೆಂಗಳೂರು, ಜು 04 (Daijiworld News/MSP): ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡು ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಇದೀಗ ಹೊಸ ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ಅದು ಈ ಬಾರಿ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಕಂಟ್ರೋಲ್ ಮಾಡುವ ಮೂಲಕ. ನಿತ್ಯನಂದ ಯೂನಿವರ್ಸಿಟಿಯಲ್ಲಿ ಪೋಸ್ಟ್ ಮಾಡಿದ ಈ ವಿಡೀಯೋ ಸಖತ್ ವೈರಲ್ ಆಗಿದೆ.
ಸೂರ್ಯನನ್ನೇ ಕಂಟ್ರೋಲ್ ಮಾಡುವ ಸಾಮರ್ಥ್ಯ ನನಗಿದೆ. ನಾನು ಇವತ್ತು ತಡವಾಗಿ ಉದಯಿಸುವಂತೆ ಸೂರ್ಯನಿಗೆ ಹೇಳಿದ್ದೆ. ಹೀಗಾಗಿಯೇ ನನ್ನ ಮಾತಿಗೆ ಬೆಲೆ ಕೊಟ್ಟು ಸೂರ್ಯ ತಡವಾಗಿ ಉದಯಿಸಿದ್ದಾನೆ ಎಂದು ತನ್ನ ಅನುಯಾಯಿಗಳ ಮುಂದೆ ಕಥೆ ಹೆಣೆದಿದ್ದಾನೆ.
ಬಿಡದಿಯ ತನ್ನ ಆಶ್ರಮದಲ್ಲಿ ಅನುಯಾಯಿಗಳಿಗೆ ಇತ್ತೀಚೆಗೆ ಪ್ರವಚನ ನೀಡುವಾಗ ಈ ಮಾತು ಹೇಳಿದ್ದು, ಬೆಳಗ್ಗೆ ಧ್ವಜಾರೋಹಣ 6.40 ರಿಂದ 7 ಗಂಟೆಯೊಳಗೆ ಮುಗಿಯಬೇಕು. ಆದರೆ ಇಂದು ನಾನು ಧ್ವಜಾರೋಹಣಕ್ಕೆ ಬರೋದು ಸ್ವಲ್ಪ ಲೇಟ್ ಆದ ಕಾರಣ ದ್ವಜಾರೋಹಣ ಮುಗಿಸುವವರೆಗೂ ನಾನು ಸೂರ್ಯನಿಗೆ ಉದಯಿಸದಂತೆ ಸೂರ್ಯನಿಗೆ ಹೇಳಿದ್ದೆ. ಹೀಗಾಗಿ ಇವತ್ತು ಸೂರ್ಯದೇವ 40 ನಿಮಿಷ ತಡವಾಗಿ ಉದಯಿಸಿದ್ದಾನೆ ಎಂದಿದ್ದಾನೆ.
ಹೀಗಾಗಿ ನನಗೆ ಬಾಸ್ಕರನನ್ನು ಕಂಟ್ರೋಲ್ ಮಾಡುವ ಶಕ್ತಿ ಇದೆ ಎಂದು ಹೇಳಿಕೊಂಡಿದ್ದಾನೆ. ನಿಮ್ಮ ನಂಬಿಕೆ ಬಾರದಿದ್ದರೆ ಇಂದು ಬಿಡದಿಯಲ್ಲಿ ಸೂರ್ಯೋದಯವಾಗಬೇಕಿದ್ದ ಸಮಯ ಮತ್ತು ಸೂರ್ಯೋದಯವಾದ ಸಮಯವನ್ನು ಪರೀಕ್ಷಿಸಿ ಎಂದು ಹೇಳಿದ್ದಾನೆ.