ನವದೆಹಲಿ, ಜು 04 (Daijiworld News/MSP): ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ದ ಭ್ರಷ್ಟಾಚಾರ ಮತ್ತು ಕಳ್ಳತನದ ಆರೋಪಗಳನ್ನು ಹೊರಿಸಿ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮುಖಂಡ ಮತ್ತು ರಾಜೌರಿ ಗಾರ್ಡನ್ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ರಾಷ್ಟ ರಾಜಧಾನಿಯ ಬಿಜೆಪಿ ಕಚೇರಿ ಮುಂದೆ ಬೃಹತ್ ಕಟೌಟ್ ಹಾಕಿದ್ದಾರೆ.
ಒಂದು ಪೋಸ್ಟರ್ನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹಣದ ಕಪ್ಪು ಚೀಲವನ್ನು ಹಿಡಿದು ಕೈದಿಯ ಸಮವಸ್ತ್ರವನ್ನು ಧರಿಸಿರುವಂತೆ ಬಿಂಬಿಸಲಾಗಿದ್ದು, ಈ ವ್ಯಂಗ್ಯಚಿತ್ರದ ಪೋಸ್ಟರ್ ನಲ್ಲಿ. "ತನ್ನನ್ನು ತಾನು ಪ್ರಾಮಾಣಿಕನೆಂದು ಹೇಳಿಕೊಳ್ಳುವವನು ದೊಡ್ಡ ಕಳ್ಳನೆಂದು ಹೊರಹೊಮ್ಮುತ್ತಾನೆ" ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
"ಸಾಮಾನ್ಯವಾಗಿ ಶಾಲಾ ಕೊಠಡಿಯನ್ನು ನಿರ್ಮಿಸಲು 5 ಲಕ್ಷ ರೂ. ವೆಚ್ಚವಾದರೆ ಅದನ್ನು ಕ್ರೇಜ್ ವಾಲ್ ಅವರು 25 ಲಕ್ಷ ರೂ.ಗಳಲ್ಲಿ ಮಾಡಿದ್ದಾರೆ" ಎಂದು ಉಲ್ಲೇಖಿಸಿ ಕೆಳಭಾಗದಲ್ಲಿ ಮಂಜಿಂದರ್ ಸಿಂಗ್ ಸಿರ್ಸಾ ಅವರ ಹೆಸರನ್ನು ಬರೆಯಲಾಗಿದೆ.
ಮಂಜಿಂದರ್ ಸಿಂಗ್ ಸಿರ್ಸಾ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ಗೆ "ಏಕ್ ಬಾರ್ ನಹಿ ಹಜಾರ್ ಬಾರ್ ಕಹುಂಗಾ - ಕೇಜ್ರಿವಾಲ್ ಚೋರ್ ಹೈ (ಒಮ್ಮೆ ಅಲ್ಲ ಆದರೆ ನಾನು ಅದನ್ನು ಸಾವಿರ ಬಾರಿ ಹೇಳುತ್ತೇನೆ - ಕೇಜ್ರಿವಾಲ್ ಕಳ್ಳ)" ಎಂದು ಬರೆದುಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ನಡೆಸಿದ ಹಗರಣವು ಕೋಟ್ಯಂತರ ರೂಪಾಯಿಗಳದ್ದು ಎಂದು ಸಿರ್ಸಾ ಮತ್ತೊಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.