ಚಿಕ್ಕಮಗಳೂರು, ನ. 28 (DaijiworldNews/AA): ಚಿರತೆ ದಾಳಿಗೆ 5 ವರ್ಷದ ಬಾಲಕಿ ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಮನೆ ಮುಂದೆ ನಿಂತಿದ್ದ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

ಹೃದಯ್ (11) ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಬಾಲಕ ಮನೆಯ ಬಳಿ ನಿಂತಿದ್ದ ವೇಳೆ ಆತನ ಮೇಲೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಿಂಗದಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಾರದ ಹಿಂದಷ್ಟೆ ಮನೆಯ ಹಿಂದೆ ನಿಂತಿದ್ದ 5 ವರ್ಷದ ಬಾಲಕಿಯನ್ನು ತಂದೆಯ ಮುಂದೆಯೇ ಚಿರತೆ ಹೊತ್ತೊಯ್ದಿತ್ತು. ಬಳಿಕ ಬಾಲಕಿಯ ಮೃತದೇಹ ಕಾಡಂಚಲ್ಲಿ ಪತ್ತೆಯಾಗಿತ್ತು. ಸದ್ಯ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.