ಶಿವಮೊಗ್ಗ, ನ. 29 (DaijiworldNews/AA): ಶೀಘ್ರದಲ್ಲೇ ಸರ್ಕಾರಿ ಶಾಲೆಗಳಿಗೆ 12,000 ಮತ್ತು ಅನುದಾನಿತ ಶಾಲೆಗಳಿಗೆ 6,000 ಸೇರಿ ಒಟ್ಟು 18,000 ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಯಾವುದೇ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ 12,000, ಅನುದಾನಿತ ಶಾಲೆಗಳಿಗೆ 6,000 ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸ್ವಾಗತಕ್ಕೆ ಈ ಶಿಕ್ಷಕರೇ ಉಪಸ್ಥಿತರಿರುತ್ತಾರೆ. ಅಲ್ಲಿಗೆ ನಾವು ಒಟ್ಟು 32,000 ಶಿಕ್ಷಕರ ನೇಮಕ ಮಾಡಿದ ಹಾಗೆ ಆಗುತ್ತದೆ" ಎಂದು ತಿಳಿಸಿದರು.
"ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಇಲಾಖೆ ಸಹ ಸಹಕಾರ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಂಶುಪಾಲರು, ಉಪಪ್ರಾಂಶುಪಾಲರ ಕಾರ್ಯಾಗಾರ ನಡೆಸಲಾಗುತ್ತಿದೆ. ಶಿಕ್ಷಕರನ್ನು ಸರಿಯಾಗಿ ಇಲಾಖೆ ಬಳಸಿಕೊಳ್ಳುತ್ತಿದೆ. ಅದರಂತೆ ವಿದ್ಯಾರ್ಥಿಗಳಿಗೂ ಕೂಡ ಸರಿಯಾಗಿ ಭೋದನೆ ಮೂಲಕ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುತ್ತಿದೆ. ಯುದ್ಧಕಾಲದಲ್ಲಿ ಶಸ್ತ್ರಭ್ಯಾಸದ ಬದಲು ಈಗಿನಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರಕವಾಗಿ ತಯಾರಿ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರದವರು ಕೇವಲ 5,000ದೊಳಗೆ ಶಿಕ್ಷಕರ ನೇಮಕಾತಿ ಮಾಡಿದ್ರು. ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕರ ನೇಮಕಾತಿ ಆದಷ್ಟು ಬೇಗನೆ ಮುಗಿಯಲಿದೆ" ಎಂದು ಸ್ಪಷ್ಟನೆ ನೀಡಿದರು.
"ಇನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ವಿಐಎಸ್ಎಲ್ ಕಾರ್ಖಾನೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾರ್ಖಾನೆ ಪುನಶ್ಚೇತನ ಮಾಡುತ್ತೆವೆಂದು ಎಷ್ಟು ವರ್ಷದಿಂದ ಹೇಳುತ್ತಿದ್ದಾರೆ. ಕೇವಲ ಹೇಳಿಕೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಬೇಕು. ಅವರ ಹೇಳಿಕೆಯನ್ನ ಅವರು ಉಳಿಸಿಕೊಂಡು ಹೋಗಲಿ ಎಂದು ನಾನು ಹಾರೈಸುತ್ತೇನೆ" ಎಂದರು.