ಮೊಹಾಲಿ, ನ. 29 (DaijiworldNews/AA): ಭಾರತ ಶೀಘ್ರದಲ್ಲೇ ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಮೊಹಾಲಿಯ ಸೆಮಿಕಂಡಕ್ಟರ್ ಲ್ಯಾಬೊರೇಟರಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಮೊಹಾಲಿಯ ಎಸ್ಸಿಎಲ್ನಲ್ಲಿ 'ಸೆಮಿಕಂಡಕ್ಟರ್ ಪ್ರಕ್ರಿಯೆ ಗ್ಯಾಲರಿ' ಮತ್ತು 'ಪಾರಂಗತ್' ಸೆಮಿಕಂಡಕ್ಟರ್ ತರಬೇತಿ ಪ್ರಯೋಗಾಲಯವನ್ನು ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಅವರ 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಅಡಿಯಲ್ಲಿ, ಪಂಜಾಬ್ ಮೂಲದ ಈ ಘಟಕವನ್ನು ಸುಮಾರು 4,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮೇಲ್ದರ್ಜೆಗೇರಿಸಲಾಗುವುದು. ಆಧುನಿಕ ಉಪಕರಣಗಳು ಮತ್ತು ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಪ್ರಸ್ತುತ ಉತ್ಪಾದನಾ ಸಾಮರ್ಥ್ಯಕ್ಕಿಂತ 100 ಪಟ್ಟು ಹೆಚ್ಚು ಉತ್ಪಾದನೆ ಗುರಿ ಹೊಂದಲಾಗಿದೆ. ಈ ಮೇಲ್ದರ್ಜೆಗೇರಿಸುವಿಕೆಯಿಂದ ಚಿಪ್ ತಯಾರಿಕೆಗೆ ಸಂಬಂಧಿಸಿದಂತೆ ಆಯಕಟ್ಟಿನ ಸಂಶೋಧನೆ ಮತ್ತು ವಿದ್ಯಾರ್ಥಿಗಳ ಅಗತ್ಯಗಳನ್ನು ಎಸ್ಸಿಎಲ್ ಪೂರೈಸಲಿದೆ" ಎಂದು ತಿಳಿಸಿದರು.
ಸಂಸ್ಥೆಯ ದೀರ್ಘಕಾಲೀನ ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಎಸ್ಸಿಎಲ್ ಪಕ್ಕದಲ್ಲಿರುವ 25 ಎಕರೆ ಜಮೀನನ್ನು ಒದಗಿಸುವಂತೆ ಪಂಜಾಬ್ ಸರ್ಕಾರಕ್ಕೆ ಮನವಿ ಮಾಡಿದ ಅವರು, ಸಂಸ್ಥೆಯನ್ನು ಖಾಸಗೀಕರಣಗೊಳಿಸಲಾಗುತ್ತದೆ ಎಂಬ ಎಸ್ಸಿಎಲ್ ನೌಕರರ ಆತಂಕವನ್ನು ತಳ್ಳಿ ಹಾಕಿದರು. "ಈ ಸೌಲಭ್ಯವು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಲಿದ್ದು, ದೇಶದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದರು.