ಚೆನ್ನೈ, ನ. 29 (DaijiworldNews/AA): ತಮಿಳುನಾಡು ಕರಾವಳಿಗೆ ಭಾನುವಾರ ದಿತ್ವಾಹ್ ಚಂಡಮಾರುತ ಅಪ್ಪಳಿಸಲಿದ್ದು, ಪರಿಣಾಮ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ದಿತ್ವಾಹ್ ಚಂಡಮಾರುತ ಪರಿಣಾಮದಿಂದ ತಮಿಳುನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುವ ಮುನ್ಸೂಚನೆಯಿದೆ. ಈ ಹಿನ್ನೆಲೆ ಚೆನ್ನೈನ ವಿಮಾನಯಾನ ಅಧಿಕಾರಿಗಳು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಮಧುರೈ, ತಿರುಚಿರಾಪಳ್ಳಿ, ತೂತುಕುಡಿ, ಸೇಲಂ, ಬೆಂಗಳೂರು, ಹೈದರಾಬಾದ್ ಮತ್ತು ಜಾಫ್ನಾ ಮುಂತಾದ ಸ್ಥಳಗಳಿಗೆ ನಿರ್ಗಮನ ಮತ್ತು ಆಗಮನ ಎರಡು ಮಾರ್ಗದ ವಿಮಾನಗಳು ರದ್ದುಗೊಂಡಿವೆ. ಭಾರೀ ಮಳೆ ಹಾಗೂ ಗಾಳಿಯಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿತ್ವಾಹ್ ಚಂಡಮಾರುತ ತೀವ್ರಗೊಳ್ಳುತ್ತಿದ್ದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನೂ ಸ್ಥಳೀಯ ಪ್ರದೇಶದಲ್ಲಿ ಆಗುತ್ತಿರುವ ಮಳೆಯ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಿಲ್ಲಾವಾರು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನೂ ತಮಿಳುನಾಡು ಕರಾವಳಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಂಜಾವೂರಿನ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ದೋಣಿಗಳಿಗೆ ಸುರಕ್ಷಿತವಾಗಿ ಲಂಗರು ಹಾಕಿದ್ದಾರೆ. ಇನ್ನು ಭಾನುವಾರ ಬೆಳಗಿನ ಜಾವ 'ದಿತ್ವಾಹ್ ಚಂಡಮಾರುತ' ಉತ್ತರ-ವಾಯ್ಯುವ ದಿಕ್ಕಿಗೆ ಚಲಿಸುವ ಸಾಧ್ಯತೆಯಿದ್ದು, ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.