ಶಿವಮೊಗ್ಗ, ನ. 29 (DaijiworldNews/TA): ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ಕುರಿತು ಸಂಸದ ಬಿ.ವೈ. ರಾಘವೇಂದ್ರ ತೀವ್ರ ಕಿಡಿಕಾರಿದ್ದು, ಸಿಎಂ–ಡಿಸಿಎಂ ನಡುವಿನ ಸಮಾಲೋಚನೆಗೆ ‘ತಾತ್ಕಾಲಿಕ ಬ್ರೇಕ್’ ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಈ ಪರಿಸ್ಥಿತಿಯನ್ನು ಹಾಸ್ಯಾತ್ಮಕವಾಗಿ ಹೋಲಿಸಿ, “ಇದು ಹೃದಯಾಘಾತಕ್ಕೆ ಸ್ಟಂಟ್ ಹಾಕಿ ಜೀವ ಉಳಿಸಿಕೊಂಡಂತಿದೆ” ಎಂದು ವ್ಯಂಗ್ಯವಾಡಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಬ್ರೆಕ್ಫಾಸ್ಟ್ ಮೀಟಿಂಗ್ ಕುರಿತು ಪ್ರತಿಕ್ರಿಯಿಸಿ, “ಪವರ್ ಶೇರಿಂಗ್ ವಿವಾದಕ್ಕೆ ಈಗ ಒಂದು ತಾತ್ಕಾಲಿಕ ವಿರಾಮ ಸಿಕ್ಕಿದೆ. ಆದರೆ ಅಧಿವೇಶನದ ಬಳಿಕ ಇದೇ ಕಿತ್ತಾಟ ಮತ್ತೆ ತೀರಾ ಬಿರುಸುಗೊಂಡು ಮುಂದುವರಿಯಲಿದೆ” ಎಂದು ಹೇಳಿದರು.
ಸರ್ಕಾರದ ಒಳಜಗಳದಿಂದ ಆಡಳಿತ ವ್ಯವಸ್ಥೆ ಗಂಭೀರವಾಗಿ ಹಾಳಾಗುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು. “ಕುರ್ಚಿ ಕದನದಿಂದ ಅಧಿಕಾರಿಗಳು ನಿಗದಿತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಇಲಾಖೆಗಳಲ್ಲೆಲ್ಲ ಅಭದ್ರತೆ, ಗೊಂದಲದ ವಾತಾವರಣ ನಿರ್ಮಾಣವಾಗಿದೆ” ಎಂದು ಅವರು ಹೇಳಿದರು.