ನವದೆಹಲಿ, ನ. 29 (DaijiworldNews/TA): ದೇಶದಲ್ಲಿ ಸೈಬರ್ ಕ್ರೈಂ ಮತ್ತು ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಆದೇಶ ಹೊರಡಿಸಿದೆ. ಬ್ಯಾಂಕ್ಗಳು, ಮ್ಯೂಚುವಲ್ ಫಂಡ್ಗಳು, ಪಿಂಚಣಿ ನಿಧಿ ಕಂಪನಿಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಮಾಡುವ ಎಲ್ಲಾ ಕರೆಗಳನ್ನು ಕಡ್ಡಾಯವಾಗಿ ‘1600’ ಸರಣಿಯ ವಿಶೇಷ ಸಂಖ್ಯೆಗಳ ಮೂಲಕವೇ ಕಳುಹಿಸಬೇಕೆಂದು TRAI ತಿಳಿಸಿದೆ. ಈ ನಿಯಮವು ಮಾರ್ಚ್ 2026ರೊಳಗೆ ಹಂತ ಹಂತವಾಗಿ ಜಾರಿಯಾಗಲಿದೆ ಎಂದು ಪ್ರಕಟಿಸಲಾಗಿದೆ.

ಸೈಬರ್ ವಂಚನೆ ತಡೆಗಟ್ಟಲು 1600 ಸರಣಿ ಯಾಕೆ? : ಇಲ್ಲಿಯವರೆಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಬಂದ ಕರೆ ಯಾವುದು, ವಂಚಕರಿಂದ ಬಂದದ್ದು ಯಾವುದು ಎನ್ನುವುದು ಗ್ರಾಹಕರಿಗೆ ಸ್ಪಷ್ಟವಾಗಿರಲಿಲ್ಲ. ಈ ದುರ್ಬಲತೆಯನ್ನು ಬಳಸಿಕೊಂಡ ಸೈಬರ್ ಅಪರಾಧಿಗಳು ವಿವಿಧ ಅನಧಿಕೃತ ಸಂಖ್ಯೆಗಳ ಮೂಲಕ ಕರೆ ಮಾಡಿ, ತಾವು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಗ್ರಾಹಕರಿಂದ ಒಟಿಪಿ, ಖಾತೆ ವಿವರ, ಪಾಸ್ವರ್ಡ್ಗಳಂತಹ ವೈಯಕ್ತಿಕ ಮಾಹಿತಿಯನ್ನು ಪಡೆದು ವಂಚಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ, ಹಣಕಾಸು ಸಂಸ್ಥೆಗಳ ಕರೆಗಳು ನಿಖರವಾಗಿ ಗುರುತಿಸಬಹುದಾಗುವಂತೆ TRAI 1600 ಸರಣಿಯನ್ನು ಕಡ್ಡಾಯಗೊಳಿಸಿದೆ. TRAI ಪ್ರಕಾರ, “ಈ ಕ್ರಮದಿಂದ ವಿಶ್ವಾಸಾರ್ಹ ಹಣಕಾಸು ಕರೆಗಳನ್ನು ನಾಗರಿಕರು ಸುಲಭವಾಗಿ ಗುರುತಿಸಬಹುದು” ಎಂದು ತಿಳಿಸಿದೆ.
1600 ಸರಣಿ ಹೇಗೆ ಇರಲಿದೆ? :
ಕರೆಗಳು +91-1600 ಸಂಖ್ಯೆಯಿಂದ ಪ್ರಾರಂಭವಾಗಲಿದೆ.
+91 – ಭಾರತದ ಅಂತರಾಷ್ಟ್ರೀಯ ಕೋಡ್.
ಉದಾಹರಣೆ:
ಎಸ್ಬಿಐ ಕರೆಗಳು → +91-1600-01-8000
ಎಸ್ಬಿಐ ಮತ್ತೊಂದು ಸಂಖ್ಯೆ → +91-1600-01-8002
ಇದೇ ಮಾದರಿಯನ್ನು ಎಲ್ಲಾ ನಿಯಂತ್ರಿತ ಹಣಕಾಸು ಸಂಸ್ಥೆಗಳು ಅನುಸರಿಸಬೇಕು.
-ಪ್ರಸ್ತುತ 485 ಹಣಕಾಸು ಸಂಸ್ಥೆಗಳು ಈಗಾಗಲೇ ಬಳಕೆ : ದೂರಸಂಪರ್ಕ ಇಲಾಖೆ ಈಗಾಗಲೇ ‘1600’ ಸಂಖ್ಯೆ ಬ್ಲಾಕ್ ಅನ್ನು ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮೀಸಲಿರಿಸಿದ್ದು, ಪ್ರಸ್ತುತ 485 ಹಣಕಾಸು ಸಂಸ್ಥೆಗಳು 2,800 ಕ್ಕೂ ಹೆಚ್ಚು ಸಂಖ್ಯೆಗಳನ್ನೊಳಗೊಂಡ 1600 ಸರಣಿ ಬಳಕೆ ಮಾಡುತ್ತಿವೆ.