ಗೋಕರ್ಣ, ನ. 29 (DaijiworldNews/TA): ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಗೋಕರ್ಣ ಈ ಬಾರಿ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ನಾರ್ವೆ ದೇಶದ ಯುವ ಜೋಡಿ ಸ್ಯಾಮ್ ಮತ್ತು ಆರ್ಟಿಮಾ, ಭಾರತೀಯ ಸಂಪ್ರದಾಯ ಮತ್ತು ಹಿಂದೂ ವಿಧಿವಿಧಾನಗಳಿಗೆ ಪೂರ್ಣ ಗೌರವ ಸಲ್ಲಿಸುತ್ತಾ, ಬೀಚ್ನ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ನಡೆಯಿತು. ನೈಸರ್ಗಿಕ ಸೌಂದರ್ಯ ಮತ್ತು ಸಂಪ್ರದಾಯದ ಸಂಯೋಜನೆಯಾಗಿ ನಡೆದ ಈ ಮದುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ವೃತ್ತಿಯಲ್ಲಿ ಶೆಫ್ ಆಗಿರುವ ಸ್ಯಾಮ್ ಮತ್ತು ಆರ್ಟಿಮಾ, ಗೋಕರ್ಣದ ಬೀಚ್ ಬಳಿ ವಿಶೇಷವಾಗಿ ಅಲಂಕರಿಸಲಾದ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೂವುಗಳಿಂದ ಸಿಂಗಾರಗೊಂಡ ಮಂಟಪ, ದೀಪಾಲಂಕಾರ ಮತ್ತು ಸಂಪ್ರದಾಯಬದ್ಧ ವಾತಾವರಣವು ಭಾರತೀಯ ಮದುವೆಯ ಸೌಂದರ್ಯವನ್ನು ಹೆಚ್ಚಿಸಿತು. ವೇ. ಪ್ರಸನ್ನ ಜೋಗಭಟ್, ವೇ. ಮಹೇಶ್ ಅಡಿ ಸೇರಿದಂತೆ ಸ್ಥಳೀಯ ವೈದಿಕರು ವೇದ ಮಂತ್ರೋಚ್ಚಾರಣೆ ಮೂಲಕ ಸಂಪೂರ್ಣ ಹಿಂದೂ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿದರು. ವಿದೇಶಿ ಜೋಡಿ ಪ್ರತೀ ವಿಧಿಯನ್ನು ಭಕ್ತಿ ಮತ್ತು ಗೌರವದೊಂದಿಗೆ ಪಾಲಿಸಿಕೊಂಡು ಹೋಗಿರುವುದು ಗಮನ ಸೆಳೆಯಿತು.
ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು, ಸ್ಯಾಮ್ ಮತ್ತು ಆರ್ಟಿಮಾ ತಮ್ಮ ಹೊಸ ಬದುಕಿನ ಪ್ರಥಮ ಹೆಜ್ಜೆ ಇಟ್ಟರು. ವೇದಮಂತ್ರಗಳು ಮತ್ತು ತಾಳಮದ್ದಲದ ನಾದದ ನಡುವೆ ಜೋಡಿ ಭಾವುಕರಾದರು. ಸಾಂಪ್ರದಾಯಿಕ ಮದುವೆಯ ಪ್ರಮುಖ ಭಾಗವಾಗಿರುವ ಮಾಂಗಲ್ಯ ಧಾರಣೆಯ ವೇಳೆ, ಸ್ಯಾಮ್ ಅವರು ಆರ್ಟಿಮಾ ಅವರ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ ಕ್ಷಣ ಮಂಟಪದಲ್ಲಿ ಸಂಭ್ರಮವನ್ನು ಸೃಷ್ಟಿಸಿತು. ನೆರೆದಿದ್ದ ಎಲ್ಲರೂ ಅಕ್ಷತೆ ಕಾಳು ಹಾಕಿ ನವಜೋಡಿಗೆ ಆಶೀರ್ವಾದ ಕೋರಿದರು. ಈ ದೃಶ್ಯ ಗೋಕರ್ಣದ ಸಂಸ್ಕೃತಿಪರ ಪರಂಪರೆಯೊಂದಿಗೆ ಮತ್ತೊಂದು ಅಪರೂಪದ ನೆನಪಾಗಿ ಉಳಿಯಲಿದೆ.
ವಿವಾಹದ ಅಂಗವಾಗಿ ಜೋಡಿ ಹೂವಿನ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಗೋಕರ್ಣಕ್ಕೆ ಹಲವು ವರ್ಷಗಳಿಂದ ಭೇಟಿ ನೀಡುತ್ತಿರುವ ಸ್ಯಾಮ್, ಕೆಫೆ ಪ್ಯಾರಡೈಸ್ ರೆಸಾರ್ಟ್ನ ಮಾಲಕರಾದ ಮುರಳಿ ಕಾಮತ್ ಕುಟುಂಬದ ಆತಿಥ್ಯದಲ್ಲಿ ಮದುವೆಯನ್ನು ಆಯೋಜಿಸಿದರು. ಮುರಳಿ ಕಾಮತ್ ಕುಟುಂಬ ಹಾಗೂ ಆಪ್ತರಿಂದ ಜೋಡಿಗೆ ಹಾರೈಕೆಗಳ ಮಳೆ ಸುರಿಯಿತು. ಭಾರತೀಯ ಉಡುಪು, ಮಂಟಪದ ಸಿಂಗಾರ ಮತ್ತು ಹಿಂದೂ ಮದುವೆಯ ವಿಧಿವಿಧಾನ ಈ ನಾರ್ವೆಯ ಜೋಡಿಗೆ ಹೊಸ ಅನುಭವವಾಗಿತ್ತು. ಅವರು ಹಾಗೂ ಅವರ ಕುಟುಂಬ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮೆಚ್ಚಿಕೊಂಡರು. ಸಮಾರಂಭದಲ್ಲಿ ಪಾಲ್ಗೊಂಡ ವಿದೇಶಿ ಅತಿಥಿಗಳು ಭಾರತೀಯ ಆಚರಣೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ಸಮುದ್ರದ ಅಲೆಗಳ ಸದ್ದು, ಸಾಂಪ್ರದಾಯಿಕ ಮಂಟಪ, ವಿದೇಶಿ ಜೋಡಿಯ ಸಂಸ್ಕೃತಿ-ಸಂಗಮ ಈ ಮದುವೆಯ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿದ್ದು, ಸಾವಿರಾರು ಜನರು ಜೋಡಿಗೆ ಶುಭ ಹಾರೈಸುತ್ತಿದ್ದಾರೆ.