ಮಂಡ್ಯ, ನ. 29 (DaijiworldNews/TA): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.

ಹೋಮ ಕುಂಡದಲ್ಲಿ ಪೂರ್ಣಾಹುತಿ ಸಲ್ಲಿಸಿದ ನಂತರ ಅಭಿಷೇಕ, ಮಂಗಳಾರತಿ ಸೇರಿದಂತೆ ವಿವಿಧ ವಿಧಿವಿಧಾನಗಳಲ್ಲಿ ಭಾಗಿಯಾದ ದಂಪತಿ, ದೇವಾಲಯದ ಇತಿಹಾಸ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಅರ್ಚಕರಿಂದ ಮಾಹಿತಿ ಪಡೆದರು.
ಪೂಜೆಯ ನಂತರ ಮಾತನಾಡಿದ ಡಿಕೆ ಶಿವಕುಮಾರ್, ತಿಹಾರ್ ಜೈಲಿನಲ್ಲಿ ಇದ್ದ ವೇಳೆ ತಮ್ಮ ಅತ್ತೆ-ಮಾವ ಈ ದೇವಾಲಯಕ್ಕೆ ನಾಲ್ಕು ಬಾರಿ ಬಂದು ಪ್ರಾರ್ಥನೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು. ಎರಡು ವರ್ಷಗಳಿಂದ ಸ್ನೇಹಿತರೊಬ್ಬರು ಇಲ್ಲಿ ಭೇಟಿ ನೀಡುವಂತೆ ಸಲಹೆ ನೀಡುತ್ತಿದ್ದರೆಂದೂ, ಇಂದು ದೇವಾಲಯದ ಮಹಿಮೆ ಅನುಭವಿಸಿದಂತಾಯಿತು ಎಂದೂ ಹೇಳಿದರು.
ಎಲ್ಲಾ ಧರ್ಮದ ಜನರು ಬರುತ್ತಿರುವ ಈ ದೇವಾಲಯದ ಕಟ್ಟಡ ನಿರ್ಮಾಣದಲ್ಲೂ ಮುಸ್ಲಿಮರು ಕೆಲಸ ಮಾಡುತ್ತಿರುವುದು ಸಮಗ್ರತೆಯ ಸಂಕೇತವಾಗಿದೆ ಎಂದು ಅವರು ಶ್ಲಾಘಿಸಿದರು. “ರಾಜ್ಯಕ್ಕೆ ಒಳಿತಾಗಲಿ” ಎಂಬ ಸಂಕಲ್ಪದೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ ಡಿಸಿಎಂ, ತಮ್ಮ ಉನ್ನತ ಹುದ್ದೆಗೆ ಹೋಮ ನಡೆದಿದೆಯೇ ಎಂಬ ಪ್ರಶ್ನೆಗೆ “ಅಂತಹ ವಿಚಾರ ನನಗೆ ತಿಳಿದಿಲ್ಲ, ಹಿರಿಯರು ನನಗೆ ತೋರಿಸಿರುವ ಪ್ರೀತಿ ಅಷ್ಟೇ” ಎಂದು ಸ್ಪಷ್ಟಪಡಿಸಿದರು.