ಬೆಳಗಾವಿ, ನ. 30 (DaijiworldNews/TA): ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ಆಡಳಿತವನ್ನು ಗಂಭೀರ ಗೊಂದಲಕ್ಕೆ ತಳ್ಳಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಹುಕ್ಕೇರಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರೇಕ್ಫಾಸ್ಟ್ ಮೀಟಿಂಗ್ ಕೂಡಾ ಹಳೆಯ ರಾಗವನ್ನು ಪುನರಾವರ್ತಿಸಿದಂತಾಗಿತ್ತು ಎಂದು ಟೀಕಿಸಿದರು. “ಹಾಡಿದ್ದ ಹಾಡೋ ಕಿಸಬಾಯಿ ದಾಸ” ಎಂಬ ಗಾದೆಯನ್ನು ಉದಾಹರಿಸುತ್ತಾ, ರಾಜ್ಯದ ಮೂಲಭೂತ ಹಿತಕ್ಕಾಗಿ ಯಾವುದೇ ಹೊಂದಾಣಿಕೆ ನಡೆದಿಲ್ಲ ಎಂದರು.
ಜೋಶಿ, “ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ರೈತರು ಬೀದಿಗಿಳಿಯುತ್ತಿದ್ದಾರೆ. ಹೈ ಕಮಾಂಡ್ ಹೇಳಿದಂತೆ ಮಾತನಾಡುತ್ತಿದ್ದಾರೆ ಹೊರತು, ರಾಜ್ಯದ ಹಿತದೃಷ್ಟಿಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ತಮ್ಮ ಪಟ್ಟವನ್ನು ಸಡಿಲಿಸುವ ಲಕ್ಷಣವೂ ತೋರಿಸುತ್ತಿಲ್ಲ” ಎಂದು ಹೇಳಿಕೆ ನೀಡಿದರು.
ರಾಜ್ಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿದೆ ಎಂದು ಜೋಶಿ ಹೇಳಿದರು. ಇದು ಫ್ರೀ-ಪಾರ್-ಆಲ್ ಆಡಳಿತವಾಗಿದೆ. ಹೇಳುವವರಿಲ್ಲ, ಕೇಳುವವರಿಲ್ಲ. ರಾಜ್ಯದ ಜನರಿಂದ ದೊರೆತ ಬೆಂಬಲವನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಬದಲಾಗಿ, ಕಚ್ಚಾಟದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಆರ್ಥಿಕ ಸದೃಢ ಕರ್ನಾಟಕ ಅಧೋಗತಿಯತ್ತ ಹೋಗುತ್ತಿದೆ ಎಂದು ಹೇಳಿದರು.
ಅವರು ಮುಂದುವರೆದು, ಸಿದ್ದರಾಮಯ್ಯ ಸರ್ಕಾರ ಸ್ಥಾಪನೆಯಾದಾಗಿನಿಂದ ಬದಲಾವಣೆ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ದಲಿತ ಸಿಎಂ ವಿಚಾರವನ್ನು ಬಿಜೆಪಿ ಎತ್ತಿಲ್ಲ. ಕಾಂಗ್ರೆಸ್ನವರೇ ಅದನ್ನು ರಾಜಕೀಯಕ್ಕೆ ಬಳಸಿಕೊಂಡರು. ಇವರ ಸರ್ಕಾರ ಹಿಂದೆ ಹೇಗಿತ್ತೋ, ಮುಂದಿನ ಎರಡು-ಮೂರು ವರ್ಷವೂ ಹೀಗೆಯೇ ಸಾಗುತ್ತದೆ ಎಂದು ಭವಿಷ್ಯ ನುಡಿದರು.