ನವದೆಹಲಿ, ನ. 30 (DaijiworldNews/TA): ಡಿಸೆಂಬರ್ 1ರಿಂದ ಆರಂಭವಾಗಲಿರುವ ಸಂಸತ್ ಚಳಿಗಾಲದ ಅಧಿವೇಶನಕ್ಕೆ ಮುನ್ನ ಕೇಂದ್ರ ಸರ್ಕಾರ ಇಂದು ಸರ್ವಪಕ್ಷ ಸಭೆಯನ್ನು ನಡೆಸಿತು. ಅಧಿವೇಶನದಲ್ಲಿ ಎದುರಾಗಬಹುದಾದ ವಿಷಯಗಳನ್ನು ಚರ್ಚಿಸಲು ಹಾಗೂ ಉಭಯ ಸದನಗಳಲ್ಲಿ ಸುಸೂತ್ರವಾಗಿ ಕಾರ್ಯಚರಣೆ ನಡೆಯಲು ಸರ್ಕಾರ ಈ ಸಭೆಯನ್ನು ಕರೆದಿತ್ತು.

ಈ ಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ, ಇತ್ತೀಚಿನ ದೆಹಲಿ ಸ್ಫೋಟ ಪ್ರಕರಣ, ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಹಲವು ವಿಚಾರಗಳನ್ನು ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಮುನ್ನೆಲೆಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮತ್ತು ರಾಜ್ಯ ಸಚಿವ ಅರ್ಜುನ ರಾಮ್ ಮೇಘವಾಲ್ ಭಾಗವಹಿಸಿದರು.
ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯ್ ಮತ್ತು ಪ್ರಮೋದ್ ತಿವಾರಿ, ಡಿಎಂಕೆಯ ಟಿಆರ್ ಬಾಲು, ಟಿಎಂಸಿಯ ಡೆರೆಕ್ ಓ'ಬ್ರೈನ್, ಮತ್ತು ಐಯುಎಂಎಲ್ನ ಇಟಿ ಮೊಹಮ್ಮದ್ ಬಶೀರ್ ಭಾಗವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭೆ ನಾಯಕ ಜೆ.ಪಿ. ನಡ್ಡಾ, ಆರ್ಜೆಡಿಯ ಮನೋಜ್ ಝಾ, ಎಸ್ಎಡಿಯ ಹರ್ಸಿಮ್ರತ್ ಕೌರ್ ಬಾದಲ್, ಮತ್ತು ಜೆಡಿಯು ಪ್ರತಿನಿಧಿ ಸಂಜಯ್ ಝಾ ಸಹ ಹಾಜರಿದ್ದರು. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದ್ದು, ವಿರೋಧ ಪಕ್ಷಗಳು ಕಠಿಣ ಚರ್ಚೆಗೆ ಸಿದ್ಧವಾಗಿವೆ.