ಬೆಂಗಳೂರು, ನ. 30 (DaijiworldNews/AA): ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028 ರ ಚುನಾವಣೆ ನಮ್ಮ ಮುಂದಿನ ಗುರಿ" ಎಂದು ಹೇಳಿದ್ದಾರೆ.
"ನಾನು ಯಾವತ್ತೂ ಗುಂಪುಗಾರಿಕೆ ಮಾಡುವುದಿಲ್ಲ. ಎಲ್ಲರೂ ಗಮನಿಸಿರುವಂತೆ ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ನಾನು 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿ ಇರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡಲ್ಲ" ಎಂದರು.
"ನಾನು ಕುಮಾರಸ್ವಾಮಿ ಅವರ ಜತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಮಿ ಅವರು ಒಪ್ಪದೇ ಇರಬಹುದು, ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ಗೊತ್ತಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು" ಎಂದು ವಾಗ್ದಾಳಿ ನಡೆಸಿದರು.