ಹುಬ್ಬಳ್ಳಿ, ನ. 30 (DaijiworldNews/AA): ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಒಬ್ಬರಿಗೊಬ್ಬರು ಬಾವಿಯಲ್ಲಿ ಕೆಡವಲು ನೋಡುತ್ತಿದ್ದಾರೆ ಅಷ್ಟೇ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಬ್ಬರೂ ಸಿಎಂ ಮತ್ತು ಅಧಿಕಾರ ಹಂಚಿಕೆ ವಿಚಾರದಲ್ಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎನ್ನುತ್ತಾರೆ. ಹಾಗಾದರೆ ಇಲ್ಲಿವರು ಬ್ರೇಕ್ ಫಾಸ್ಟ್ ನೆಪದಲ್ಲಿ ಅರ್ಧ ಇಡ್ಲಿ ತಿನ್ನಬೇಕಿತ್ತೇ? ಸಿಎಂ ಕುರ್ಚಿಗಾಗಿ ಸಿಎಂ - ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಮೇಲ್ನೋಟಕ್ಕೆ ಎಲ್ಲವನ್ನೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುತ್ತಿದ್ದಾರೆ. ಆದರೆ ಈರ್ವರೂ ಜಟಾಪಟಿ ಮಾತ್ರ ಬಿಟ್ಟಿಲ್ಲ" ಎಂದರು.
"ಇಬ್ಬರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಖರ್ಗೆ ಅವರದ್ದು ಏನೂ ನಡೆಯುವುದಿಲ್ಲ. ಎಲ್ಲಾ ನಕಲಿ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರದ್ದೇ ಫೈನಲ್. ಹಾಗಾಗಿ ಖರ್ಗೆ ಹೈಕಮಾಂಡ್ ಮೇಲೆ ಎತ್ತಿ ಹಾಕುತ್ತಿದ್ದಾರೆ" ಎಂದು ತಿಳಿಸಿದರು.
"ಸಿಎಂ, ಡಿಸಿಎಂ ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಜೈಲಿಗೂ ಹೋಗಿ ಶಾಸಕರ ಬೆಂಬಲ ಕೋರುತ್ತಿದ್ದಾರೆ. ಅಂದರೆ ಸಿಎಂ ಗದ್ದುಗೆ ಜಟಾಪಟಿ ಕಾಂಗ್ರೆಸ್ ನಲ್ಲಿ ಅದೆಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂಬುದನ್ನು ತೋರ್ಪಡಿಸುತ್ತದೆ. ಬ್ರೇಕ್ಫಾಸ್ಟ್, ಒಗ್ಗಟ್ಟು ಎಂಬುದೆಲ್ಲಾ ಒಂದು ನಾಟಕ" ಎಂದು ಹೇಳಿದರು.