ಚೆನ್ನೈ, ನ. 30 (DaijiworldNews/AA): ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ 11 ಮಂದಿ ಸಾವನ್ನಪ್ಪಿ, 20 ಜನರು ಗಾಯಗೊಂಡಿರುವ ಘಟನೆ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಸಂಭವಿಸಿದೆ.

ತಿರುಪತ್ತೂರು ಪ್ರದೇಶದ ಪಿಳ್ಳೈಯಾರ್ಪಟ್ಟಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಎರಡು ತಮಿಳುನಾಡು ಸರ್ಕಾರಿ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿವೆ. ಒಂದು ಬಸ್ ತಿರುಪ್ಪೂರಿನಿಂದ ಕಾರೈಕುಡಿಗೆ ಪ್ರಯಾಣಿಸುತ್ತಿತ್ತು. ಇನ್ನೊಂದು ಬಸ್ ಕಾರೈಕುಡಿಯಿಂದ ದಿಂಡಿಗಲ್ ಜಿಲ್ಲೆಯ ಕಡೆಗೆ ಸಾಗುತ್ತಿತ್ತು.
ರಕ್ಷಣಾ ತಂಡಗಳು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದ್ದು, ಅಪಘಾತದ ಕಾರಣ ಮತ್ತು ಆಸ್ಪತ್ರೆಗೆ ದಾಖಲಾದವರ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.