ನವದೆಹಲಿ, ಡಿ. 01 (DaijiworldNews/TA): ಸಂಸತ್ನ ಚಳಿಗಾಲದ ಅಧಿವೇಶನ ಇಂದು ಆರಂಭವಾಗುತ್ತಿದ್ದು, ಡಿಸೆಂಬರ್ 19ರಂದು ಕೊನೆಗೊಳ್ಳಲಿದೆ. ಈ ಬಾರಿ ಗುಟ್ಕಾ, ಪಾನ್ ಮಸಾಲಾ ಮತ್ತು ತಂಬಾಕು ಆಧಾರಿತ ಉತ್ಪನ್ನಗಳ ಉದ್ಯಮವನ್ನು ಗುರಿಯಾಗಿಸಿದ ಕಠಿಣ ಕಾನೂನನ್ನು ಕೇಂದ್ರ ಸರ್ಕಾರ ಪರಿಚಯಿಸಲು ಸಜ್ಜಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಆರೋಗ್ಯ ಭದ್ರತೆಯಿಂದ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025’ ಅನ್ನು ಮಂಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹೊಸ ಮಸೂದೆಯ ಪ್ರಕಾರ, ತಂಬಾಕು, ಗುಟ್ಕಾ, ಪಾನ್ ಮಸಾಲಾ ಉತ್ಪಾದನಾ ಘಟಕಗಳ ಮೇಲೆ ವಿಶೇಷ ಸೆಸ್ ವಿಧಿಸಲಾಗುತ್ತದೆ. ಇದು ಈಗಿನಂತೆ ಉತ್ಪಾದನಾ ಪ್ರಮಾಣದ ಮೇಲೆ ಅಲ್ಲ, ಕಾರ್ಖಾನೆಗಳಲ್ಲಿರುವ ಯಂತ್ರಗಳ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಲೆಕ್ಕಿಸಲ್ಪಡಲಿದೆ. ಕೈಯಿಂದ ಉತ್ಪಾದನೆ ಮಾಡುವ ಘಟಕಗಳಿಗೆ ಸ್ಥಿರ ಮಾಸಿಕ ಸೆಸ್ ವಿಧಿಸುವ ವ್ಯವಸ್ಥೆಯೂ ಸೇರಿದೆ. ಅಧಿಕಾರಿಗಳ ಪ್ರಕಾರ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಹೆಚ್ಚುವರಿ ಆದಾಯ ಸಂಗ್ರಹಿಸುವುದು ಈ ಮಸೂದೆಯ ಪ್ರಮುಖ ಗುರಿಯಾಗಿದೆ.
ಯಾವಾಗ ಸೆಸ್ ವಿನಾಯ್ತಿ? :
ಯಂತ್ರವೇಗದ ಉತ್ಪಾದನೆ ಮಾಡುವ ಘಟಕಗಳಿಗೆ ಪ್ರತಿ ತಿಂಗಳು ಸೆಸ್ ಕಡ್ಡಾಯ. ಉತ್ಪಾದನೆಯಲ್ಲಿ ನಷ್ಟವಾದರೂ ಅಥವಾ ಲಾಭ ಬಂದರೂ ಸೆಸ್ ಪಾವತಿಸಬೇಕು. ಆದರೆ ಯಂತ್ರ ಅಥವಾ ಘಟಕವು 15 ದಿನಗಳಿಗಿಂತ ಹೆಚ್ಚು ಕಾಲ ಸಂಪೂರ್ಣವಾಗಿ ಮುಚ್ಚಿರುವ ಪರಿಸ್ಥಿತಿಯಲ್ಲಿ ಮಾತ್ರ ಆ ಅವಧಿಗೆ ವಿನಾಯ್ತಿ ಸಿಗಲಿದೆ.
ಕಠಿಣ ನಿಯಮಗಳೊಂದಿಗೆ ಮೇಲ್ವಿಚಾರಣೆ:
ಹೊಸ ಕಾನೂನು ಜಾರಿಗೆ ಬಂದರೆ
-ಎಲ್ಲಾ ತಯಾರಕರಿಗೂ ನೋಂದಣಿ ಕಡ್ಡಾಯ
-ಪ್ರತಿ ತಿಂಗಳು ಉತ್ಪಾದನೆ ಹಾಗೂ ಸೆಸ್ ವಿವರಗಳ ರಿಟರ್ನ್ಸ್ ಸಲ್ಲಿಕೆ
-ಅಧಿಕಾರಿಗಳಿಗೆ ಯಾವುದೇ ಸಮಯದಲ್ಲಿ ಕಾರ್ಖಾನೆ ರೇಡ್ ಅಥವಾ ಲೆಕ್ಕಪರಿಶೋಧನೆ ಮಾಡುವ ಅಧಿಕಾರ
-ನಿಯಮ ಉಲ್ಲಂಘನೆ ಮಾಡಿದರೆ ಗರಿಷ್ಠ 5 ವರ್ಷ ಜೈಲು ಹಾಗೂ ಭಾರೀ ದಂಡ
ಯಾವಾಗ ಬೇಕಾದರೂ ಸೆಸ್ ದರವನ್ನು ಹೆಚ್ಚಿಸುವ ಅಧಿಕಾರವನ್ನೂ ಸರ್ಕಾರ ಕಾಯ್ದಿರಿಸಿಕೊಂಡಿದೆ. ಹೊಸ ಕಾನೂನು ಜಾರಿಗೆ ಬಂದರೆ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಕರಿಗೆ ನೇರ ಆರ್ಥಿಕ ಹೊರೆ ಬೀಳಲಿದೆ. ಇದರ ಪರಿಣಾಮವಾಗಿ ಉತ್ಪನ್ನಗಳ ಬೆಲೆ ಏರಿಕೆ ಸಾಧ್ಯತೆ ಜಾಸ್ತಿ. ಇದು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ ಎಂದು ಗುಟ್ಕಾ ಪ್ರಿಯರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.