ಬೆಂಗಳೂರು, ಡಿ. 01 (DaijiworldNews/TA): ಕರ್ನಾಟಕ ಉಪಮುಖ್ಯಮಂತ್ರಿ ಡಿಕೆಶಿ ಅವರು ನಗರದ ವಿಧಾನಸೌಧದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯರ ನಡುವೆ ಯಾವುದೇ ಗುಂಪಿನ ಉದ್ಭವ ಇಲ್ಲವೆಂದು ಪುನಃ ಒತ್ತಿ ಹೇಳಿದ್ದಾರೆ.

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಸಂದರ್ಭದಲ್ಲಿ ಡಿಕೆಶಿ ಹನುಮಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವೆಲ್ಲಾ ಬ್ರದರ್ಸ್ ಥರ ಕೆಲಸ ಮಾಡ್ತೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ನಾವೆಲ್ಲ ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಸಿದ್ದರಾಮಯ್ಯನೊಬ್ಬ ಗುಂಪಾಗಿರೋರು, ಡಿಕೆಶಿ ಗುಂಪು ಅಂತ ತೋರಿಸಬೇಡಿ,” ಎಂದು ಹೇಳಿದರು.
ಮುಂದುವರಿದು, ಅವರು ಕಳೆದ ನಾಯಕರು ಮಾಡಿರುವ ನಗರಾಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ, “ಹನುನಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದ್ರು, ಕೆಂಪೇಗೌಡ ಬೆಂಗಳೂರನ್ನು ನಿರ್ಮಿಸಿದ್ದಾರೆ. ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗುಡ್ಡೆ ಬಿಟ್ ಹೋಗಿದ್ದಾರೆ. ನಾವೂ ಅದೇ ರೀತಿಯಲ್ಲಿ ಕೆಲಸ ಮಾಡಬೇಕು,” ಎಂದರು.
ಡಿಕೆಶಿ, ತಮ್ಮ ಪಕ್ಷದ 140 ಮಂದಿ ಶಾಸಕರೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. “ನಾವು ಬ್ರೇಕ್ಫಾಸ್ಟ್ ಮೀಟಿಂಗ್ ಆಯೋಜಿಸುತ್ತೇವೆ, ನಮ್ಮಲ್ಲಿ ಯಾವುದಕ್ಕೂ ಒತ್ತಡವಿಲ್ಲ. ಯಾವುದೇ ಗುಂಪು ಇಲ್ಲ,” ಎಂದು ಸ್ಪಷ್ಟಪಡಿಸಿದರು.