ಚಿಕ್ಕಮಗಳೂರು, ಡಿ. 01 (DaijiworldNews/TA): ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಾಳೆಯಿಂದ (ಡಿಸೆಂಬರ್ 2) ಮೂರು ದಿನಗಳ ದತ್ತ ಜಯಂತಿ ಉತ್ಸವವನ್ನು ಆಚರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನ ಜಾರಿಗೊಳಿಸಿದೆ. ಯಾವುದೇ ಅಹಿತಕರ ಘಟನೆಗಳ ತಪ್ಪಿಸಲು ಪ್ರವಾಸಿಗರ ಪ್ರವೇಶ ನಿರ್ಬಂಧ ಮತ್ತು ಭದ್ರತಾ ಕಾಯ್ದೆಗಳನ್ನೆಲ್ಲಾ ಕಡ್ಡಾಯಗೊಳಿಸಲಾಗಿದೆ.

ಡಿ.3ರಂದು ಬೃಹತ್ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ವಾರದ ಸಂತೆಗೆ ನಿಷೇಧ ವಿಧಿಸಲಾಗಿದೆ. ಡಿ.4ರಂದು ದತ್ತ ಪಾದುಕೆ ದರ್ಶನದ ಸಂದರ್ಭದಲ್ಲಿ ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಅಂಗಡಿಗಳನ್ನು ಮುಂಗಟ್ಟು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಡಿ.5ರ ಬೆಳಗ್ಗೆ 10 ಗಂಟೆಯವರೆಗೆ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದರ್ಶನಕ್ಕೆ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ. ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ.
ದತ್ತ ಜಯಂತಿ ಕಾರ್ಯಕ್ರಮದ ಹಿನ್ನೆಲೆ 15ಕ್ಕೂ ಹೆಚ್ಚು ಡ್ರೋನ್ ಕ್ಯಾಮರಾಗಳನ್ನು ಒಳಗೊಂಡ ಬಿಗಿ ಬಂದೋಬಸ್ತ್ ಕಾರ್ಯಾಚರಣೆ ಜಾರಿಯಲ್ಲಿದೆ. ವಿವಿಧ ಸ್ಥಳಗಳಲ್ಲಿ ಒಟ್ಟು 28 ಚೆಕ್ಪೋಸ್ಟ್ಗಳು ತೆರೆದಿದ್ದು, ಹಗಲು-ರಾತ್ರಿ ಕಣ್ಗಾವಲು ಇರಲಿದೆ. ದೇಗುಲದೊಳಗೆ ಫೋಟೋ ಮತ್ತು ವೀಡಿಯೊ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಭಕ್ತರು ಪ್ಲಾಸ್ಟಿಕ್ ವಸ್ತು ಬಳಕೆ ಮಾಡದಂತೆ, ದಾರಿಯಲ್ಲಿ ಕಸ ಹಾಕದಂತೆ ಸೂಚಿಸಲಾಗಿದೆ.
ಡಿ.4ರಂದು ಬೆಳಿಗ್ಗೆ 6 ಗಂಟೆಯಿಂದ ಭಕ್ತರಿಗೆ ಪೀಠ ಪ್ರವೇಶ ಅವಕಾಶ ಸಿಗಲಿದೆ. ಮಧ್ಯಾಹ್ನ 2 ಗಂಟೆಯ ನಂತರ ಪ್ರವೇಶ ನಿಷೇಧ. ಜಿಲ್ಲಾ ಅಧಿಕಾರಿಗಳ ಪ್ರಕಾರ, ಉತ್ಸವವು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಸುರಕ್ಷಿತವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.