ನವದೆಹಲಿ, ಡಿ. 01 (DaijiworldNews/ AK): ಚಳಿಗಾಲದ ಅಧಿವೇಶನ ಆರಂಭದ ದಿನವೇ ಲೋಕಸಭೆಯಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಿದ ಪರಿಣಾಮ ಮಧ್ಯಾಹ್ನದ ವರೆಗೆ ಕಲಾಪ ಮುಂದೂಡಲಾಗಿದೆ.

ಇಂದಿನಿಂದ ಸಂಸತ್ ಅಧಿವೇಶನ ಶುರುವಾಗಿದ್ದು, ಡಿ.19ರಂದು ಮುಕ್ತಾಯಗೊಳ್ಳಲಿದೆ. ಲೋಕಸಭೆ ಕಲಾಪದ ಆರಂಭದಲ್ಲಿ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾಗೂ ಅಂಧರ ಮಹಿಳಾ ಕ್ರಿಕೆಟ್ ಮತ್ತು ಕಬಡ್ಡಿ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಇದಾದ ಬಳಿಕ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ, ವಿಪಕ್ಷಗಳು ಎಸ್ಐಆರ್ ಹಾಗೂ ವೋಟ್ ಚೋರಿ ಕುರಿತು ಚರ್ಚಿಸಲು ಆಗ್ರಹಿಸಿ ಗದ್ದಲ ಸೃಷ್ಟಿಸಿದರು. ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು.
ಸದನವು ಚರ್ಚೆ ಮತ್ತು ಸಂವಾದಗಳಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಹೇಳಿದದರು. ಆದರೆ ಸ್ಪೀಕರ್ ಮಾತನ್ನು ಲೆಕ್ಕಿಸದೇ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಾ, ಘೋಷಣೆ ಕೂಗಿದರು. ಈ ಹಿನ್ನೆಲೆ ಸ್ಪೀಕರ್ ಕಲಾಪವನ್ನು ಮಧ್ಯಾಹ್ನದ ವೇಳೆಗೆ ಮುಂದೂಡಿದರು.