ತಿರುವನಂತಪುರಂ,ಡಿ. 01 (DaijiworldNews/ AK): ಚುನಾವಣಾ ಆಯೋಗವು ಕೇರಳದ ಚುನಾವಣಾ ಸಿಬ್ಬಂದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಎಸ್ಐಆರ್ (ಮತದಾರರ ಪಟ್ಟಿಯ ಪರಿಷ್ಕರಣೆ) ಮತ್ತು ಚುನಾವಣಾ ಆಯೋಗ ಒದಗಿಸಿದ ಅಪ್ಲಿಕೇಶನ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡುವ ಕೆಲಸದಿಂದ ವಿರಾಮ ಪಡೆಯಲು ಜುಂಬಾ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಬ್ಬರು ಬಿಎಲ್ಒ (ಬೂತ್ ಮಟ್ಟದ ಅಧಿಕಾರಿಗಳು) ಆತ್ಮಹತ್ಯೆ ಮಾಡಿಕೊಂಡಿರುವುದರ ನಡುವೆ ಕೇರಳದಲ್ಲಿ ಬಿಎಲ್ಒ ಜುಂಬಾ ಡ್ಯಾನ್ಸ್ ಮಾಡುತ್ತಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ನೆಟ್ಟಿಗರು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಟೀಕೆ ಮಾಡುತ್ತಿದ್ದಾರೆ.
ಸಣ್ಣ ವಿರಾಮ, ಬಲಿಷ್ಠ ತಂಡ ಎಂದು ಈ ವಿಡಿಯೋಗೆ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿರುವ ಚುನಾವಣಾ ಆಯೋಗ ಬಿಎಲ್ಒಗಳು ಸೇರಿದಂತೆ ಚುನಾವಣಾ ಅಧಿಕಾರಿಗಳು ಕೇರಳದಲ್ಲಿ ನಡೆಯುತ್ತಿರುವ ಎಸ್ಐಆರ್ ಅಡಿಯಲ್ಲಿ ತಮ್ಮ ಕೆಲಸದ ನಡುವೆ ವಿರಾಮ ಸಮಯವನ್ನು ಆನಂದಿಸುತ್ತಿದ್ದಾರೆ ಎಂದು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ತಿಳಿಸಿದೆ. ಕೇರಳದ ಎಡಚೇರಿ ಗ್ರಾಮದಲ್ಲಿ ಬಿಎಲ್ಒಗಳು, ಸ್ವಯಂಸೇವಕರು ಮತ್ತು ಕಂದಾಯ ಸಿಬ್ಬಂದಿ ತಮ್ಮ ಕಾರ್ಯನಿರತ ವೇಳಾಪಟ್ಟಿಯ ನಡುವೆ ವಿರಾಮವನ್ನು ಆನಂದಿಸುತ್ತಿರುವ ವಿಡಿಯೋ ಇದಾಗಿದೆ.