ಬೆಂಗಳೂರು, ಡಿ. 01 (DaijiworldNews/ AK):ಮುಖ್ಯಮಂತ್ರಿ ಕುರ್ಚಿಗೆ ದಿನೇದಿನೇ ಪೈಪೋಟಿ ಜಾಸ್ತಿ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಏಳೆಂಟು ಜನ ಹಿರಿಯ ಶಾಸಕರು ಅಥವಾ ಸಚಿವರು ಹೇಗಾದರೂ ಮುಖ್ಯಮಂತ್ರಿ ಆಗಬೇಕೆಂದು ಪೈಪೋಟಿಗೆ ಇಳಿದಿದ್ದಾರೆ ಎಂದು ತಿಳಿಸಿದರು.
ಇದರ ಪರಿಣಾಮವಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಬಗ್ಗೆ ಅಸಡ್ಡೆ ತೋರುತ್ತ ಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಧಾನಿಯವರು ಜಾರಿಗೊಳಿಸಿದ್ದರು.
ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ 4 ಸಾವಿರ ಹೆಚ್ಚುವರಿಯಾಗಿ ನೀಡಿತ್ತು. ಅದಕ್ಕೆ ಕಲ್ಲುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿ ಜಾರಿಗೊಳಿಸಿದರು. ಅದಕ್ಕೂ ಕಲ್ಲು ಹಾಕಿದರು ಎಂದು ದೂರಿದರು.