ನವದೆಹಲಿ, ಜು05(Daijiworld News/SS): ಪ್ರತಿಬಾರಿಯ ಬಜೆಟ್ನಲ್ಲಿ ಕೇಂದ್ರ ಸರಕಾರ ಗ್ರಾಮೀಣ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಚಯಿಸುತ್ತದೆ. ಹಲವು ಹೊಸ ಯೋಜನೆ, ಘೋಷಣೆ ಮೂಲಕ ಒಂದಷ್ಟು ಹಣಕಾಸು ನಿಧಿಯನ್ನು ಮೀಸಲಿರಿಸುತ್ತದೆ.
ನಗರಕೇಂದ್ರಿತ ಯೋಜನೆಗಳು ಹೆಚ್ಚು ಹೆಚ್ಚು ಜನಪ್ರಿಯ ಮತ್ತು ಅಧಿಕ ಅನುದಾನ ಪಡೆದುಕೊಳ್ಳುತ್ತಿವೆ. ಆದರೆ ಗ್ರಾಮೀಣ ಭಾರತದ ಸ್ಥಿತಿ ಮಾತ್ರ ಬದಲಾಗಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೋದಿ ಸರಕಾರದ ಎರಡನೇ ಪೂರ್ಣ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಬಡತನ ನಿರ್ಮೂಲನೆ, ಆರ್ಥಿಕ ಅಸಮಾನತೆ, ನಗರ ಮತ್ತು ಹಳ್ಳಿಗಳ ನಡುವಣ ಅಂತರ ಕಡಿಮೆಗೊಳಿಸುವುದು, ಕಲ್ಯಾಣ ಕಾರ್ಯಕ್ರಮ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಹಾಗೂ ರೈತರ ಶ್ರೇಯೋಭಿವೃದ್ಧಿಗೆ, ಕೃಷಿ ಕಲ್ಯಾಣಕ್ಕೆ ನರೇಂದ್ರ ಮೋದಿ ಸರಕಾರ ಕೊಡುಗೆ ನೀಡುವುದೇ ಎಂಬ ನಿರೀಕ್ಷೆ ಗ್ರಾಮೀಣ ಭಾರತದಲ್ಲಿದೆ.
ಹಣಕಾಸು ಸಚಿವರಾಗಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಕಾಲದ ಸಂಪ್ರದಾಯಕ್ಕೆ ಅಂತ್ಯ ಹಾಡಿ ಹೊಸ ನಡೆ ಅನುಸರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದುವರೆಗೆ ಬಜೆಟ್ ಮಂಡನೆ ಮಾಡುತ್ತಿದ್ದ ಸಚಿವರು ಚರ್ಮದ ಬ್ರೀಫ್ಕೇಸ್ನಲ್ಲಿ ಬಜೆಟ್ ಪ್ರತಿಗಳನ್ನು ತರುತ್ತಿದ್ದರು. ದೊಡ್ಡ ಮೊತ್ತದ ಆಯವ್ಯಯದ ಕುರಿತಾಗಿ ಬಜೆಟ್ ಮಂಡಿಸುವುದರ ಸಂಕೇತವಾಗಿ ಈ ಬ್ರೀಫ್ಕೇಸ್ಅನ್ನು ಬಳಸಲಾಗುತ್ತಿತ್ತು.
ಆದರೆ, ನಿರ್ಮಲಾ ಸೀತಾರಾಮನ್ ಅವರು ಕೆಂಪು ಬಣ್ಣದ ಪುಟಾಣಿ ಚೀಲವನ್ನು ತಂದಿದ್ದಾರೆ. ಅದರಲ್ಲಿ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ಥಂಭದ ಲಾಂಛನವಿದೆ. ಈ ಚೀಲಕ್ಕೆ ಲೆಡ್ಜರ್ ಎಂದು ಕರೆಯಲಾಗುತ್ತದೆ. ಈ ಮೂಲಕ ಹಳೆಯ 'ಬ್ರೀಫ್ಕೇಸ್ ಸಂಸ್ಕೃತಿ'ಯನ್ನು ಅಂತ್ಯಗೊಳಿಸಿದ್ದಾರೆ.
ಸೂಟ್ ಕೇಸು ಭಾರತೀಯ ಸಂಸ್ಕೃತಿಯಲ್ಲ, ಅದು ಪಾಶ್ಚಾತ್ಯ ಬಳುವಳಿ ಕೆಂಪು ಬಣ್ಣ ಪಾಶ್ಚಿಮಾತ್ಯ ಗುಲಾಮಗಿರಿಯಿಂದ ಹೊರಬಂದಿರುವ ಸಂಕೇತವಾಗಿರುವುದರಿಂದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣದ ಬಟ್ಟೆಯಲ್ಲಿ ಗಂಟುಕಟ್ಟಿ ಬಜೆಟ್ ಪ್ರತಿಯನ್ನು ತಂದಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಸಲಹೆಗಾರರು ಹೇಳಿದ್ದಾರೆ.