ನವದೆಹಲಿ, ಜೂ 05 (Daijiworld News/MSP): ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ್ದಾರೆ. ಈ ಸಂದರ್ಭ ಚಿಲ್ಲರೆ ವ್ಯಾಪಾರಸ್ಥರಿಗೂ ಪಿಂಚಣಿ ಯೋಜನೆ ಘೋಷಿಸಿರುವ ಮೋದಿ ಸರ್ಕಾರ, ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.
ಇದರೊಂದಿಗೆ ವಿದ್ಯುತ್ ವಾಹನಗಳ ಖರೀದಿಗೆ ಪ್ರೋತ್ಸಾಹ ,ರೈಲ್ವೆಯಲ್ಲಿ ಖಾಸಗಿ -ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ಕರ್ಮಯೋಗಿ ಸಮ್ಮಾನ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಇದಲ್ಲದೆ, 10 ಸಾವಿರ ಕೃಷಿಕರ ಸಂಘ ಸ್ಥಾಪಿಸಲು ನಿರ್ಧರಿಸಲಾಗಿದೆ. ಬೆಳೆಗಳಿಗೆ ಸೂಕ್ತ ಬೆಲೆಗೆ ಆದ್ಯತೆ, ಕೃಷಿ ಆಧರಿತ ಕೈಗಾರಿಕೆಗಳಿಗೆ ಖಾಸಗಿ ಹೂಡಿಕೆಗೆ ಒತ್ತು, ಸಣ್ಣ ಉದ್ಯೋಗಿಗಳಿಗೆ 59 ಸೆಕೆಂಡ್ಗಳಲ್ಲಿ ಸಾಲ ನೀಡುವ ವ್ಯವಸ್ಥೆ, ಪ್ರತಿಯೊಬ್ಬರಿಗೂ ಗೃಹ ನಿರ್ಮಾಣ, ವಿಮೆ ಕ್ಷೇತ್ರದಲ್ಲಿ ಶೇ. 100 ರಷ್ಟು FDI ಹೂಡಿಕೆಗೆ ಅನುಮತಿ ಮೂಲಕ ಹಲವು ಯೋಜನೆಗಳಿಗೆ ಬಜೆಟ್ ನಲ್ಲಿ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ.
ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ್ದ ವಿತ್ತ ಸಚಿವೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಇಂಡಸ್ಟ್ರಿಯಲ್ ಕಾರಿಡಾರ್, ಉಡಾನ್ ಸೇರಿದಂತೆ ರೈಲ್ವೆ ಸಂಪರ್ಕ ಕ್ರಾಂತಿ ಆರ್ಥಿಕತೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.