ಬೆಂಗಳೂರು, ಡಿ. 02 (DaijiworldNews/AK): ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಆರೋಪ ವಿಚಾರವಾಗಿ ಸಚಿವ ಕೆ.ಜೆ.ಜಾರ್ಜ್ಗೆ ರಿಲೀಫ್ ಸಿಕ್ಕಿದೆ. ಸಚಿವ ಜಾರ್ಜ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಬಿಜೆಪಿ ನಾಯಕರು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ. ಆ ಮೂಲಕ ಅಧಿಕಾರಿಗಳಾದ ಗೌರವ್ ಗುಪ್ತಾ, ಮಹಾಂತೇಶ ಬೀಳಗಿ, ಹೆಚ್.ಜೆ.ರಮೇಶ್ ವಿರುದ್ಧದ ಕೇಸ್ ಕೂಡ ರದ್ದಾಗಿದೆ.
ಸ್ಮಾರ್ಟ್ ವಿದ್ಯುತ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಂಧನ ಇಲಾಖೆ ವಿರುದ್ಧ ಬಿಜೆಪಿ ಸಮರ ಸಾರಿತ್ತು. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇತರೆ ಕಂಪೆನಿಗಳನ್ನು ಕೈಬಿಟ್ಟು ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಗುತ್ತಿಗೆ ನೀಡಲಾಗಿದೆ. ಈ ಕಂಪೆನಿಗಾಗಿ ಇತರೆ ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸದಂತೆ ನೋಡಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಬೇರೆ ರಾಜ್ಯಗಳಲ್ಲಿ 900 ರೂಪಾಯಿಗಳಿಗೆ ಸಿಗುವ ಸ್ಮಾರ್ಟ್ ಮೀಟರ್ ಅನ್ನು 5 ಸಾವಿರದಿಂದ 10 ಸಾವಿರ ರೂಪಾಯಿಗಳಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಹೀಗಾಗಿ ಇದೊಂದು ದೊಡ್ಡ ಹಗರಣ ಎಂದು ಆರೋಪಿಸಲಾಗಿತ್ತು.
ಇದೀಗ ಬಿಜೆಪಿ ನಾಯಕರು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.