ಹಾವೇರಿ, ಡಿ. 02 (DaijiworldNews/TA): ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ದೊಡ್ಡ ಪ್ರಮಾಣದ ಮೆಕ್ಕೆಜೋಳ ರಾಶಿ ಸುಟ್ಟು ಭಸ್ಮವಾದ ಘಟನೆ ಸವಣೂರು ತಾಲೂಕಿನ ಬಸವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥ ದ್ಯಾಮನಗೌಡ ನೀರಲಗಿ ಅವರಿಗೆ ಸೇರಿದ ಮೆಕ್ಕೆಜೋಳದ ರಾಶಿ ಬೆಂಕಿಗಾಹುತಿ ಆಗಿದ್ದು, ರೈತ ಲಕ್ಷ ಮೌಲ್ಯದ ನಷ್ಟಕ್ಕೆ ಕಂಬನಿ ಹಾಕುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಸುಮಾರು 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ರಾಶಿ ಮಾಡಲಾಗಿದ್ದು, ಆ ರಾಶಿ ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸುಮಾರು ರೂ.4 ಲಕ್ಷ ಮೌಲ್ಯದ ಮೆಕ್ಕೆಜೋಳ ಈ ದುರಂತದಲ್ಲಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ತಿಳಿದುಬಂದಿಲ್ಲದಿದ್ದರೂ, ಶಾರ್ಟ್ ಸರ್ಕ್ಯೂಟ್ ಅಥವಾ ಯಾರಾದರೂ ಎಸೆದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ನಡೆದ ಈ ದುರಂತದಿಂದ ರೈತರಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.