ತಿರುವನಂತಪುರಂ, ಡಿ. 02 (DaijiworldNews/TA): ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಕೇರಳದ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ತಮ್ಮ ಕೆಲಸದ ವಿರಾಮ ಸಮಯದಲ್ಲಿ ಜುಂಬಾ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.

“ಸಣ್ಣ ವಿರಾಮ, ಬಲಿಷ್ಠ ತಂಡ” ಎಂಬ ಕ್ಯಾಪ್ಷನ್ನೊಂದಿಗೆ ಚುನಾವಣಾ ಆಯೋಗದ ಅಧಿಕೃತ ಎಕ್ಸ್ (ಟ್ವಿಟರ್) ಹ್ಯಾಂಡಲ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಕೇರಳದ ಎಡಚೇರಿ ಗ್ರಾಮದ ಬಿಎಲ್ಒಗಳು, ಸ್ವಯಂಸೇವಕರು ಹಾಗೂ ಕಂದಾಯ ಸಿಬ್ಬಂದಿ SIR ಕಾರ್ಯದ ನಡುವೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಜುಂಬಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಇದು.
SIR ಪ್ರಕ್ರಿಯೆ ಪ್ರಾರಂಭವಾದ ನಂತರ ಬಿಎಲ್ಒಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂಬ ಆರೋಪಗಳು ಎದುರಾವುತ್ತಿದ್ದು, ಈ ಪೈಕಿ ಕೇರಳದ ಜುಂಬಾ ವಿಡಿಯೋ ಇದೀಗ ಪರ - ವಿರೋಧ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು “ಒತ್ತಡದ ಮಧ್ಯೆ ಚಿಕ್ಕ ವಿಶ್ರಾಂತಿ ಮಾನಸಿಕ ಆರೋಗ್ಯಕ್ಕೆ ಅಗತ್ಯ” ಎಂದು ಹೇಳುತ್ತಿದ್ದರೆ, ಇನ್ನು ಕೆಲವರು “ಬಿಎಲ್ಒಗಳ ಮೇಲೆ ನಡೆಯುತ್ತಿರುವ ಒತ್ತಡದ ಸಂದರ್ಭದಲ್ಲೇ ಇಂತಹ ವಿಡಿಯೋ ಬಿಡುಗಡೆ ಸರಿಯಲ್ಲ” ಎಂದು ಟೀಕಿಸಿದ್ದಾರೆ.
SIR ಪ್ರಕ್ರಿಯೆಯು ಮತದಾರರ ಪಟ್ಟಿಯ ನವೀಕರಣ, ಹೊಸ ಮತದಾರರ ಸೇರ್ಪಡೆ ಹಾಗೂ ತಪ್ಪು ವಿವರಗಳ ತಿದ್ದುಪಡಿ ಮಾಡುವ ಪ್ರಮುಖ ಹಂತವಾಗಿದ್ದು, ದೇಶದಾದ್ಯಂತ ಸಾವಿರಾರು ಬಿಎಲ್ಒಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.