ನವದೆಹಲಿ, ಡಿ. 02 (DaijiworldNews/TA): 19 ವರ್ಷದ ಯುವಕನ ಅಸಾಮಾನ್ಯ ಸಾಧನೆಗೈದಿದ್ದು, ಪ್ರಧಾನಿ ಮೋದಿ ಯುವಕನನ್ನು ಹಾಡಿಹೊಗಳಿದ್ದಾರೆ.

19 ವರ್ಷದ ವೇದಮೂರ್ತಿ ಮಹೇಶ್ ರೇಖೆ ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2,000 ಮಂತ್ರಗಳ ‘ದಂಡಕ್ರಮ ಪಾರಾಯಣ’ ಕೇವಲ 50 ದಿನಗಳಲ್ಲಿ ಯಾವುದೇ ತಪ್ಪು ಇಲ್ಲದೆ ಪೂರ್ಣಗೊಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಪೋಸ್ಟ್ನಲ್ಲಿ, “ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ದಂಡಕ್ರಮ ಪಾರಾಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮಹೇಶ್ ರೇಖೆಯ ಸಾಧನೆಗೆ ಹೆಮ್ಮೆಪಡುತ್ತಾರೆ” ಎಂದು ತಿಳಿಸಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ, ಶ್ರೀಕ್ಷೇತ್ರ ಕಾಶಿಯಲ್ಲಿ ಗಣ್ಯರು ಮತ್ತು ವಿದ್ವಾಂಸರ ಸಮ್ಮುಖದಲ್ಲಿ ಮಹೇಶ್ ರೇಖೆಗೆ ‘ದಂಡಕ್ರಮ ವಿಕ್ರಮಾದಿತ್ಯ’ ಎಂಬ ಗೌರವ ಬಿರುದನ್ನು ನೀಡಲಾಗಿದೆ. ಮಹೇಶ್ ರೇಖೆ ಮಹಾರಾಷ್ಟ್ರದ ಅಹಲ್ಯಾ ನಗರ ನಿವಾಸಿ ಮತ್ತು ವಾರಣಾಸಿಯ ಸಾಂಗ್ವೇದ ವಿದ್ಯಾಲಯದ ವಿದ್ಯಾರ್ಥಿ. ಅವರ ತಂದೆ ವೇದಮೂರ್ತಿ ಬ್ರಹ್ಮಶ್ರೀ ಮಹೇಶ ಚಂದ್ರಕಾಂತ ರೇಖೆ. ದಂಡಕ್ರಮ ಪಾರಾಯಣವು ಅತ್ಯಂತ ಕಠಿಣ ಎಂದು ಪರಿಗಣಿಸಲಾಗಿದೆ, ಆದರೆ ಮಹೇಶ್ ರೇಖೆ ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಅಭ್ಯಾಸ ನಡೆಸಿ ಈ ಸಾಧನೆಗೈದಿದ್ದಾರೆ.
ಇಲ್ಲಿಯವರೆಗೆ ಪ್ರಪಂಚದಲ್ಲಿ ದಂಡಕ್ರಮ ಪಾರಾಯಣವು 200 ವರ್ಷಗಳಲ್ಲಿ ಎರಡು ಬಾರಿ ಮಾತ್ರ ನಡೆಸಲ್ಪಟ್ಟಿತ್ತು. 200 ವರ್ಷಗಳ ಹಿಂದೆ ನಾಸಿಕ್ನಲ್ಲಿ ವೇದಮೂರ್ತಿ ನಾರಾಯಣ ಶಾಸ್ತ್ರಿ ದೇವ್ ಈ ಪಠಣವನ್ನು ಪೂರ್ಣಗೊಳಿಸಿದ್ದರು. ಮಹೇಶ್ ರೇಖೆ ಅಕ್ಟೋಬರ್ 2 ರಿಂದ ನವೆಂಬರ್ 30 ರವರೆಗೆ ಕಾಶಿಯ ರಾಮಘಟ್ಟದ ವಲ್ಲಭರಾಮ್ ಶಾಲಿಗ್ರಾಮ ಸಂಗ್ವೇದ ವಿದ್ಯಾಲಯದಲ್ಲಿ ದಂಡಕ್ರಮ ಪಾರಾಯಣ ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ.
ದಂಡಕ್ರಮ ಪಾರಾಯಣವು ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ ಸುಮಾರು 2,000 ಮಂತ್ರಗಳನ್ನು ಕಂಠಪಾಠ ಮಾಡುವ ಕಠಿಣ ಪ್ರಕ್ರಿಯೆಯಾಗಿದ್ದು, ಅದರ ಸಂಕೀರ್ಣ ಸ್ವರ ಮಾದರಿಗಳು ವೈದಿಕ ಪಠಣದ ಕಿರೀಟ ರತ್ನವೆಂದು ಹೇಳಲಾಗಿದೆ.