ನವದೆಹಲಿ, ಜು05(Daijiworld News/SS): ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠಗೊಳಿಸಬೇಕು. ಬಲಿಷ್ಠ ದೇಶದಲ್ಲಿ ಸಮರ್ಥ ನಾಗರಿಕರು ಎಂಬುದು ನಮ್ಮ ಸರ್ಕಾರದ ಧ್ಯೇಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠಗೊಳಿಸಬೇಕು. ನಮ್ಮ ದೇಶ ಅಭಿವೃದ್ಧಿಯೆಡೆಗೆ ದಾಪುಗಾಲು ಹಾಕುತ್ತಿದೆ. ಹಾಗೇ ಇಲ್ಲಿನ ಪ್ರತಿಯೊಬ್ಬರೂ ಕೂಡ ಸಶಕ್ತ ಜೀವನ ನಡೆಸಬೇಕು ಎಂಬುದು ನಮ್ಮ ಧ್ಯೇಯವಾಗಿದ್ದು ಇನ್ನು ಮುಂದೆ ಕೂಡ ಇದೇ ರೀತಿ ಮುಂದುವರಿಯುತ್ತೇವೆ ಎಂದು ಹೇಳಿದರು.
2014ರಲ್ಲಿ 1.8 ಟ್ರಿಲಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಇದ್ದಿದ್ದು, ಸದ್ಯ ಅದು 2.7 ಟ್ರಿಲಿಯನ್ಗೆ ತಲುಪಿದೆ. ಪ್ರಸಕ್ತ ವರ್ಷ 3 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಸಾಧಿಸುವ ವಿಶ್ವಾಸವಿದೆ. ಖಂಡಿತ ಕೆಲವೇ ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕತೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಲಿದೆ. ಇದು ನಮ್ಮ ನಿಶ್ಚಿತ ಗುರಿ. ಇದಕ್ಕಾಗಿ ಮೂಲಭೂತ ಸುಧಾರಣೆ ಅಗತ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶಕ್ಕೆ ಬೇಕಾದ ಅಗತ್ಯ ಸೌಕರ್ಯಗಳು, ಡಿಜಿಟಲ್ ಆರ್ಥಿಕತೆಯ ಮೇಲೆ ಹೂಡಿಕೆ ಮಾಡುವ ಅಗತ್ಯ ಹೆಚ್ಚಾಗಿದೆ. ಅಲ್ಲದೆ, ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಲ್ಲಿ ಉದ್ಯೋಗ ಸೃಷ್ಟಿಸಲು ಹೆಚ್ಚು ಒತ್ತು ನೀಡಬೇಕು. ಖರೀದಿ ಸಾಮರ್ಥ್ಯ ಸಮಾನತೆಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆ ಹೊಂದಿದೆ ಎಂದು ತಿಳಿಸಿದರು.