ನವದೆಹಲಿ, ಜು05(Daijiworld News/SS): ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಮ್ಯೂಸಿಯಂನಿಂದ ‘ಗಾಂಧಿಪೀಡಿಯಾ’ ವನ್ನು ಸ್ಥಾಪಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯಲ್ಲಿ ಘೋಷಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ಯುವಜನತೆಯಲ್ಲಿ ಗಾಂಧೀಜಿಯವರ ತತ್ವ, ವಿಚಾರಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ದೃಷ್ಟಿಯಿಂದ ಮಹಾತ್ಮ ಗಾಂಧಿಯವರ 150 ನೇ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಗಾಂಧಿಪೀಡಿಯಾ ಸ್ಥಾಪನೆಯಾಗಲಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಇರುವ ಪ್ರಮುಖ ಕಟ್ಟಡಗಳ ಮೇಲೆ ಗಾಂಧೀಜಿಯವರ ಚಿತ್ರ ಹಾಗೂ ಅವರಿಗೆ ಸಂಬಂಧಪಟ್ಟ ಗಣಕೀಕೃತ ಸಿನಿಮಾ, ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇದೇ ವೇಳೆ ಪ್ರವಾಸಿಗರನ್ನು ಸೆಳೆಯಲು 17 ಸಾಂಪ್ರದಾಯಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮೌಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.