ನವದೆಹಲಿ, ಜು05(Daijiworld News/SS): ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡನೆ ಮಾಡುವಾಗ 12ನೇ ಶತಮಾನದ ಕನ್ನಡದ ಸಾಮಾಜಿಕ ಸುಧಾರಕ ಮತ್ತು ತತ್ವಜ್ಞಾನಿಯಾಗಿರುವ ಬಸವೇಶ್ವರ ಅವರ ಜೀವನ ಮತ್ತು ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ.
2019ರ ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ಸರಕಾರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಮ್ಮ ಸರ್ಕಾರ ಮುಂದಾಗಿದೆ. ಕಾಯಕವೇ ಕೈಲಾಸ ತತ್ವದ ಅಡಿ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಮೂಲ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕೋಡ್ಸ್ ಯೋಜನೆಗೆ ಕ್ರಮ ಘೋಷಿಸಿದರು.
ಬಸವೇಶ್ವರ ಓರ್ವ ಪ್ರಗತಿಪರ ಕಾರ್ಯಕರ್ತ. ಸಂಪ್ರದಾಯಿಕ ಸಮಾಜದ ಎಲ್ಲಾ ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ದಂಗೆ ಎದ್ದವರು. ಜೊತೆಗ ವಿವಿಧ ಮುಖಗಳಲ್ಲಿ ತೀವ್ರ ಬದಲಾವಣೆಯನ್ನು ತಂದವರು. ಹೀಗಾಗಿ ಕಾಯಕವೇ ಕೈಲಾಸ ತತ್ವದಡಿಯಲ್ಲಿ ಕೌಶಲ್ಯಾಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಲೋಕಸಭೆಯಲ್ಲಿ 2019-20 ಸಾಲಿನ ಆಯವ್ಯಯ ಪತ್ರ ಮಂಡಿಸಿದ ಸಚಿವೆ ನಿರ್ಮಲಾ, ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ, ವಿದ್ಯುತ್ ಸಂಪರ್ಕ ಪಡೆಯಲು ಇಷ್ಟವಿಲ್ಲದಿರುವವರನ್ನು ಹೊರತುಪಡಿಸಿದರೆ, ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಸೌಲಭ್ಯ ಹಾಗೂ ಅಡುಗೆ ಅನಿಲ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಪ್ರತಿಯೊಂದು ವಿಷಯದಲ್ಲಿಯೂ ಗ್ರಾಮ, ಬಡವರು ಹಾಗೂ ರೈತರಿಗೇ ನಮ್ಮ ಆದ್ಯತೆ. ಪ್ರಧಾನ ಮಂತ್ರಿಯವರ ಎರಡು ಮಹತ್ತರ ಯೋಜನೆಗಳಾದ ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಮತ್ತು ಸೌಭಾಗ್ಯ ಯೋಜನೆಯು ಗ್ರಾಮೀಣ ಭಾರತದ ಪ್ರತಿಯೊಂದು ಕುಟುಂಬವನ್ನೂ ನಾಟಕೀಯ ಎನ್ನಿಸುವಷ್ಟರ ಮಟ್ಟಿಗೆ ಬದಲಾವಣೆ ಮಾಡಿದೆ. ಗ್ರಾಮೀಣ ಜನರ ಜೀವನಶೈಲಿಯೂ ಸುಧಾರಣೆ ಕಂಡಿದೆ ಎಂದು ನಿರ್ಮಲಾ ಹೇಳಿದರು.
7 ಕೋಟಿ ಎಲ್ಪಿಜಿ ಸಂಪರ್ಕಗಳನ್ನು ನೀಡುವ ಮೂಲಕ ಈಗಾಗಲೇ ಪರಿಸರಸ್ನೇಹಿ ಅಡುಗೆ ಅನಿಲವು ಬಹುತೇಕ ಮನೆಗಳನ್ನು ತಲುಪಿದೆ. ಎಲ್ಲ ಹಳ್ಳಿಗಳು ಮತತ್ತು ದೇಶಾದ್ಯಂತ ಇರುವ ಬಹುತೇಕ ಮನೆಗಳಿಗೆ ವಿದ್ಯುತ್ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ತಮ್ಮ ಸರಕಾರದ ಯೋಜನೆಗಳ ಯಶಸ್ಸನ್ನು ವಿವರಿಸುತ್ತಾ ಅವರು, ಯೋಜನೆಗಳ ಸಮರ್ಪಕ ಅನುಷ್ಠಾನ ಬಗೆಗಿನ ಇಚ್ಛಾಶಕ್ತಿ ಮತ್ತು ಜನರ ಭಾಗೀದಾರಿಯಿಂದಾಗಿ ಗ್ರಾಮೀಣ ಮನೆಗಳಲ್ಲಿ ವಿದ್ಯುತ್ ಸೌಲಭ್ಯವು ಸಾಕಷ್ಟು ಸುಧಾರಣೆ ಕಾಣಲು ಕಾರಣವಾಗಿದೆ ಎಂದು ಹೇಳಿದರು.