ಕೋಲ್ಕತ್ತಾ, ಜು 05 (Daijiworld News/SM): ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2ನೇ ಅವಧಿಯ ಬಜೆಟ್ ಮಂಡನೆ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರಂತರ 2 ಗಂಟೆ ಬಿಡುವಿಲ್ಲದೆ ಬಜೆಟ್ ಮಂಡಿಸಿದರು. ನಿರ್ಮಲಾ ಮಂಡಿಸಿರುವ ಬಜೆಟ್ ಗೆ ಪರವಿರೋಧಗಳು ಕೇಳಿ ಬಂದಿವೆ. ಕೇಂದ್ರ ಬಜೆಟ್ ನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಯಾವುದೇ ದೂರದೃಷ್ಟಿಯಿಲ್ಲದ ಕೇಂದ್ರ ಸರಕಾರ ಬಜೆಟ್ ಮಂಡಿಸಿದೆ. ಹಳಿ ತಪ್ಪಿದ ಈ ಬಜೆಟ್ ಚುನಾವಣೆಯ ಉಡುಗೊರೆಯಾಗಿದೆ ಎಂದು ದೀದಿ ವ್ಯಂಗ್ಯವಾಡಿದ್ದಾರೆ. ಬಜೆಟ್ ನಲ್ಲಿ ಕೇವಲ ಸೆಸ್ ಮಾತ್ರವಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನೂ ಹೇರಲಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗಲಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ದರ ಏರಿಕೆಯಿಂದ ಸಾರಿಗೆ, ಮಾರುಕಟ್ಟೆಯಿಂದ ಹಿಡಿದು ಅಡುಗೆ ಕೋಣೆಯ ತನಕವೂ ಪರಿಣಾಮ ಬೀರಲಿದೆ. ಈ ಬಜೆಟ್ ನಿಂಗಾಗಿ ಜನ ಸಾಮಾನ್ಯರು ಪರಿತಪಿಸಬೇಕು ಎಂದು ವ್ಯಂಗ್ಯವಾಗಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಇನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ದೇಶದ ಇತಿಹಾಸದಲ್ಲಿ ಮಹಿಳೆಯೊಬ್ಬರು ಬಜೆಟ್ ಮಂಡಿಸಿರುವುದು ಇದೇ ಎರಡನೇ ಬಾರಿಯಾಗಿದೆ. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಹಣಕಾಸು ಖಾತೆ ನಿರ್ವಹಿಸಿಕೊಂಡಿದ್ದ ಅವರು ಬಜೆಟ್ ಮಂಡಿಸಿದ್ದರು.