ನವದೆಹಲಿ, ಜು 05 (Daijiworld News/SM): ದೇಶದ ಜನರ ಮೇಲೆ ತೆರಿಗೆ ಹೊರೆ ಹೊರಿಸುವುದಿಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರದ ೨ನೇ ಅವಧಿಯ ಮೊದಲ ಬಜೆಟ್ ಇಂದು ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಜನರ ಮೇಲೆ ಅನಗತ್ಯ ತೆರಿಗೆ ಹೇರಳ ಎಂದು ಘೋಷಣೆ ಮಾಡಲಾಗಿದೆ.
5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಯಾವುದೇ ತೆರಿಗೆ ಇಲ್ಲ ಎಂದು ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಇನ್ನು ವಾರ್ಷಿಕ 400 ಕೋಟಿ ರೂಪಾಯಿ ಆದಾಯ ಹೊಂದಿರುವ ಉದ್ಯಮಗಳಿಂದ ಶೇ. 25ರಷ್ಟು ತೆರಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದೆ ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇಂಧನ ಉಳಿತಾಯಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ:
ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪೆನಿಗಳ ಮೇಲಿನ ಜಿಎಸ್ಟಿ ಇಳಿಸಲಾಗುವುದೆಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಶೇ. 12ರಿಂದ ಶೇಕಡಾ ೫ಕ್ಕೆ ಜಿಎಸ್ ಟಿ ಇಳಿಸಲು ನಿರ್ಧಾರ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ, 10 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಕಾರುಗಳನ್ನು ಖರೀಧಿಸುವವರಿಗೆ ಸಬ್ಸಿಡಿ ಕೂಡ ಲಭ್ಯವಾಗಲಿದೆ. ಸುಮಾರು 1.25 ಲಕ್ಷ ರೂಪಾಯಿ ಸಬ್ಸಿಡಿ ವಿತರಣೆಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ವಿದ್ಯುತ್ ಉಳಿತಾಯಕ್ಕೆ ಎಲ್ ಇಡಿ ಬಲ್ಬ್:
ಇನ್ನು ದೇಶದಲ್ಲಿ ವಿದ್ಯುತ್ ಸಮಸ್ಯೆ ಕೂಡ ಪ್ರಮುಖವಾಗಿದ್ದು, ಒಂದಿಷ್ಟು ಅಂಶ ವಿದ್ಯುತ್ ಉಳಿತಾಯಕ್ಕೆ ಬಜೆಟ್ ನಲ್ಲಿ ಕ್ರಮಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಇಡಿ ಬಲ್ಬ್ ವಿತರಣೆಗೆ ಕೇಂದ್ರ ನಿರ್ಧರಿಸಿದೆ. ಸುಮಾರು 60 ಕೋಟಿ ಬಲ್ಬ್ ವಿತರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ.
ಅಲ್ಲದೆ ಸೋಲಾರ್ ಮೂಲಕ ವಿದ್ಯುತ್ ಬಳಕೆ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡಲು ಕೇಂದ್ರ ನಿರ್ಧರಿಸಿದೆ. ಸೋಲಾರ್ ಅಧಿಕಾಂಶ ಬಳಸಲು ಉಪಯುಕ್ತವಾಗುವ ಕ್ರಮಗಳ ಬಗ್ಗೆಯೂ ಕೂಡ ಚಿಂತನೆಗಳನ್ನು ನಡೆಸಿದೆ. ಇನ್ನು ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಪೂರೈಕೆ ನಿರ್ಧಾರ ಮಾಡಲಾಗಿದೆ.
ಗೃಹ ನಿರ್ಮಾಣಕ್ಕೆ ಪ್ರೋತ್ಸಾಹ:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 81 ಲಕ್ಷ ಮನೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 26 ಲಕ್ಷ ಮನೆಗಳು ನಿರ್ಮಾಣವಾಗಿದ್ದು, 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ ದೊರೆಯಲಿದೆ. ಮನೆಗಳಿಗೆ ವಿದ್ಯುತ್ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದೆಂದು ತಿಳಿಸಿದ್ದಾರೆ. ಇನ್ನು 7 ಲಕ್ಷ ರೂಪಾಯಿ ತನಕ ಪಡೆಯುವ ಗೃಹಸಾಲಕ್ಕೆ 15 ವರ್ಷಗಳ ಕಾಲ ತೆರಿಗೆ ವಿನಾಯಿತಿ ಮಾಡಲಾಗಿದೆ. ೪೫ ಲಕ್ಷ ಗೃಹ ಸಾಲಕ್ಕೆ 3.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಮಾಡಲಾಗಿದೆ.
ಕೃಷಿ ವಲಯಕ್ಕೆ ಒತ್ತು
ಕೃಷಿ ವಲಯ ಪ್ರಮುಖ ಆದ್ಯತೆ ವಲಯವಾಗಿದ್ದು, ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು. ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗಾಗಿ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪನೆನೆ ನಿರ್ಧಾರ ಮಾಡಲಾಗಿದೆ.
ಹೊಸ ಆಕರ್ಷಣೆಯ ನಾಣ್ಯ ಬಿಡುಗಡೆ:
ಇನ್ನು ಪ್ರಸ್ತುವ ಚಲಾವಣೆಯಲ್ಲಿರುವ ನಾಣ್ಯಗಳ ಜತೆಗೆ ಹೊಸ ನಾಣ್ಯಗಳನ್ನು ಬಿಡುಗಡೆಗೊಳಿಸಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. 1, 2, 5, 10, 20 ರೂಪಾಯಿಗಳ ಹೊಸ ಹಾಗೂ ವಿನೂತನ ಶೈಲಿಯ ನಾಣ್ಯಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಬ್ಯಾಂಕ್ ಗಳ ವಿಲೀನ:
ಇನ್ನು ಪ್ರಸ್ತುತ ದೇಶದಲ್ಲಿರುವ ಬ್ಯಾಂಕ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮೋದಿ ಸರಕಾರದ ಬಜೆಟ್ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಬ್ಯಾಂಕ್ಗಳ ಏಕೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದೆ. ಬ್ಯಾಂಕ್ಗಳ ಏಕೀಕರಣದಿಂದ ಬ್ಯಾಂಕ್ಗಳ ಸಂಖ್ಯೆ ಇಳಿಕೆಯಾಗಲಿದೆ. ಬ್ಯಾಂಕ್ಗಳ 1 ಲಕ್ಷ ಕೋಟಿ ಅನುಪ್ತಾದಕ ಆಸ್ತಿ ರಿಕವರಿ ಮಾಡಲು ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಸಾರ್ವಜನಿಕ ರಂಗದ ಬ್ಯಾಂಕ್ಗಳಿಗೆ 70 ಸಾವಿರ ಕೋ. ಮರುಪೂರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಸಾರಿಗೆ ಸುಧಾರಣೆ:
ಭಾರತಮಾಲಾ, ಸಾಗರ್ ಮಾಲಾ ಯೋಜನೆಗಳ ಮೂಲ ರಸ್ತೆಗಳ ಅಭಿವೃದ್ಧಿ ನಡೆಯಲಿದೆ. ವಿಶೇಷ ಆರ್ಥಿಕ ವಲಯಗಳ ಮೂಲಕ ಅಂತರಾಷ್ಟ್ರೀಯ ಉದ್ಯಮದಾರಿಗೆ ಅವಕಾಶ ಕಲ್ಪಿಸಲಾಗಿದೆ. ಗಂಗಾನದಿಯಲ್ಲಿ ಒಳನಾಡು ಸಾರಿಗೆಗೆ ಆಧ್ಯತೆ ಮೂಲಕ ಜಲ ಮಾರ್ಗ ಯೋಜನೆಗೆ ಒತ್ತು ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಅಭಿವೃದ್ಧಿ ಕ್ರಮಕೈಗೊಳ್ಳಲು ಕೇಂದ್ರ ಮುಂದಾಗಿದೆ.
ನಾರಿ ಟು ನಾರಾಯಣಿ ಯೋಜನೆ:
ನಾರಿ ಟು ನಾರಾಯಣಿ ಮಂತ್ರ. ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಮಹಿಳೆ ಪಾತ್ರ ತುಂಬಾ ದೊಡ್ಡದು. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯ ಪಾಲುದಾರಿಕೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಲಿಂಗ ತಾರತಮ್ಯ ನಿವಾರಣೆಗೆ ಕ್ರಮ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷದ ವರೆಗೆ ಸಾಲ ಸೌಲಭ್ಯ ಒದಗಿಸಲಾಗಿಸಲಾಗುವುದೆಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.