ಬೆಳಗಾವಿ, ಜು 05 (Daijiworld News/SM): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ರಾಜ್ಯದ ಪಾಲಿಗೆ ನಿರಾಸೆ ಮೂಡಿಸಿದೆ ಎಂದು ಸಚಿವ ಖಾದರ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ ಯೋಜನೆ ತರುವಲ್ಲಿ ರಾಜ್ಯದ ಮೂವರು ಸಚಿವರು ಹಾಗೂ 23 ಮಂದಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ನಗಾರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಅಲ್ಲದೇ ಮೋದಿ ಸಂಪುಟದಲ್ಲಿ ಮೂವರು ಸಚಿವರಿದ್ದಾರೆ. ಸಾಲದ್ದಕ್ಕೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಸಚಿವೆ ಸೀತಾರಾಮನ್ ಮಂಡಿಸಿದ ಬಜೆಟ್ ರಾಜ್ಯದ ಪಾಲಿಗೆ ನಿರಾಸೆ ಮೂಡಿಸಿದೆ ಎಂದರು. ಇದಕ್ಕೆ ಸಚಿವರ ಹಾಗೂ ಸಂಸದರ ವೈಫಲ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯದ ಜನತೆ ನರೇಂದ್ರ ಮೋದಿ ಸರಕಾರ 25 ಸಂಸದರ ಮೂಲಕ ಬಂಪರ್ ನೀಡಿದ್ದಾರೆ. ಆದರೆ, ಇದಕ್ಕೆ ಮೋದಿ ಸರಕಾರದಿಂದ ಸೂಕ್ತ ಪ್ರತಿಫಲ ಲಭಿಸಿಲ್ಲ ಎಂದು ಟೀಕಿಸಿದ್ದಾರೆ.