ಬೆಂಗಳೂರು, ಜು 06 (Daijiworld News/MSP): ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ರಾಜೀನಾಮೆ ಸಲ್ಲಿಸಲು ಹೊರಟಿರುವ ಅತೃಪ್ತ ಶಾಸಕರು ಮನವೊಲಿಕೆಗೆ ಕಾಂಗ್ರೆಸ್ ನಾಯಕರು, ಹಾಗೂ ಟ್ರಬಲ್ ಶೂಟರ್ ಎಂದೇ ಹೆಸರಾಂಕಿತ ಸಚಿವ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ನಡುವೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಈಶ್ವರ್ ಖಂಡ್ರೆ ರಹಸ್ಯ ಸ್ಥಳವೊಂದಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮದ್ಯೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ತಮ್ಮ ಆಪ್ತರ ಬಳಿ ಎಲ್ಲವೂ ಕೈ ಮೀರಿ ಹೋಗಿದೆ ಏನು ಮಾಡಲು ಇನ್ನು ಸಾಧ್ಯವಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗಿನಿಂದಲೇ ಶಾಸಕರನ್ನು ಸಂಪರ್ಕಿಸಲು ಬೆಳಗ್ಗೆ 9 ಗಂಟೆಯಿಂದ ಕಸರತ್ತು ಮಾಡಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಈ ವೇಳೆ ಎಲ್ಲವೂ ಕೈ ಮೀರಿ ಹೋಗಿದೆ ಏನು ಮಾಡುವುದು ಎಂದು ಸಿದ್ದರಾಮಯ್ಯ ಬೇಸರದಿಂದ ಕೈ ಚೆಲ್ಲಿ ಕುಳಿತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಈ ಎಲ್ಲ ಬಂಡಾಯ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದು, ಸ್ವೀಕರ್ ರಮೇಶ್ ಕುಮಾರ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಬಂಡಾಯ ಶಾಸಕರ ತಂಡ ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಸ್ವೀಕರ್ ತಮ್ಮ ಕಚೇರಿಯಿಂದ ಹೊರ ನಡೆದಿದ್ದರು. ಒಟ್ಟಾರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೇರಿಕಾದಿಂದ ವಾಪಸ್ ಬರುವ ವೇಳೆಗೆ ಮೈತ್ರಿ ಸರಕಾರವೇ ಉರುಳಿಹೋಗುತ್ತಾ ಎನ್ನುವ ಅನುಮಾನ ಕಾಡತೊಡಗಿದೆ.