ಬೆಂಗಳೂರು, ಜು 06 (Daijiworld News/MSP): ಹನ್ನೊಂದು ಜನ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಸ್ಪೀಕರ್ ರಮೇಶ್ಕುಮಾರ್ ಹೇಳಿದ್ದಾರೆ. ಮುಂದಿನ ಕ್ರಮವೇನಿದ್ದರೂ ಮಂಗಳವಾರ ಕೈಗೊಳ್ಳುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ದೊಮ್ಮಲೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾಳೆ ಭಾನುವಾರವಾಗಿದ್ದು ರಜೆ ಇದೆ. ಇನ್ನು ಸೋಮವಾರ ನನ್ನ ವೈಯಕ್ತಿಕ ಪೂರ್ವಭಾವಿ ಕಾರ್ಯಕ್ರಮಗಳು ಇರುವುದರಿಂದ ವಿಧಾನಸೌಧಕ್ಕೆ ನಾನು ಬರೋದಿಲ್ಲ. ಹೀಗಾಗಿ ಮಂಗಳವಾರ ಕಚೇರಿಗೆ ತೆರಳಿದ ಬಳಿಕ ರಾಜೀನಾಮೆ ಪತ್ರವನ್ನು ಪರಿಶೀಲಿಸುತ್ತೇನೆ. ರಾಜೀನಾಮೆ ಪತ್ರ ಕಾರ್ಯದರ್ಶಿ ಕೈಯಲ್ಲಿ ಕೊಟ್ಟರೆ ಹೇಗೆ ಅದನ್ನು ನನ್ನ ಕೈಗೆ ಕೊಡಬೇಕು ಎಂದಿದ್ದಾರೆ.
11 ಜನ ರಾಜೀನಾಮೆ ಕೊಟ್ಟಿರುವ ಬಗ್ಗೆ ನನಗೆ ನಮ್ಮ ಕಚೇರಿಯಿಂದ ಮಾಹಿತಿ ಬಂದಿದೆ. ಅವರಿಗೆ ಸ್ವೀಕೃತಿ ಪತ್ರ ನೀಡಲು ನನ್ನ ಪಿ.ಎ ಅವರಿಗೆ ತಿಳಿಸಿದ್ದೇನೆ. ಇವರೆಲ್ಲಾ ನನಗೆ ಕರೆ ಮಾಡಿಲ್ಲ ಅಥವಾ ಅಪಾಯಿಂಟ್ಮೆಂಟ್ ತೆಗೆದುಕೊಂಡಿಲ್ಲ. ಮನಸ್ಸಿಗೆ ಬಂದ ಸಮಯದಲ್ಲಿ ಬಂದು ರಾಜೀನಾಮೆ ಕೊಡಬೇಕು ಎಂದರೆ ಹೇಗೆ ? ಮುಂಚಿತವಾಗಿ ಕರೆ ಮಾಡಿದ್ರೆ ನಾನು ಕಚೇರಿಯಲ್ಲೆ ಇರುತ್ತಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರಾದ, ಪ್ರತಾಪ್ ಗೌಡ ಪಾಟೀಲ್ , ಬಿ.ಸಿ ಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ರಾಮಲಿಂಗಾ ರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ. ಇನ್ನು ಜೆಡಿಎಸ್ ಶಾಸಕರಾದ ಗೋಪಾಲಯ್ಯ ,ಹೆಚ್. ವಿಶ್ವನಾಥ್ , ನಾರಾಯಣ ಗೌಡ ರಾಜೀನಾಮೆ ಸಲ್ಲಿಸಿದ್ದಾರೆ.