ಮೈಸೂರು, ಜು06(Daijiworld News/SS): ಶಾಸಕರು ಬೆದರಿಕೆಗಾಗಿ ರಾಜೀನಾಮೆ ಕೊಡಲು ಮುಂದಾಗಿದ್ದಾರೋ ಅಥವಾ ನಿಜವಾಗಲೂ ರಾಜೀನಾಮೆ ಕೊಟ್ಟಿದ್ದಾರೋ ನೋಡೋಣ. ಆದರೆ, ರಾಜೀನಾಮೆಗೆ ನನ್ನ ವಿರೋಧವಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟಿರುವ ಶಾಸಕರು ಹೇಡಿಗಳು. ಸಿದ್ಧಾಂತಗಳನ್ನು ಬಲಿಕೊಟ್ಟು ಏನು ಸಾಧಿಸಿಕೊಳ್ಳಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಎಲ್ಲರಿಗೂ ಅಸಮಾಧಾನ ಇತ್ತು. ಈಗ ಬಹಿರಂಗವಾಗಿದೆ ಅಷ್ಟೆ. ಕೇವಲ ಬಾಯಿ ಮಾತಿಗೆ ಜಾತ್ಯತೀತ ಶಕ್ತಿಗಳು ಒಂದಾಗಿವೆ ಎಂದು ಹೇಳುವುದಲ್ಲ. ನಮ್ಮ ನಡುವಿನ ಸಮಸ್ಯೆಗಳು ಏನು ಅಂತ ಚರ್ಚೆ ಮಾಡಬೇಕಿತ್ತು. ಅಂತಹ ಅವಕಾಶವೇ ಸೃಷ್ಟಿಯಾಗಲಿಲ್ಲ. ರಾಜೀನಾಮೆಗೆ ನನ್ನ ವಿರೋಧವಿದೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಅವರು ಹೇಳಿದಂತೆ ಬಿಜೆಪಿ ಕಚೇರಿಗೆ ಹೋಗಿ ಕಸ ಗುಡಿಸಲ್ಲ. ನಾನು ಯಾವಾಗಲೂ ರಾಜ. ರಾಜನಾಗಿಯೇ ಇರುತ್ತೇನೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ನಾನು ಮಾರಾಟದ ವಸ್ತು ಅಲ್ಲ ಎಂದು ಸ್ಪಷ್ಟಪಡಿಸಿದರು.