ತುಮಕೂರು, ಜು06(Daijiworld News/SS): ರಾಜಕೀಯದಲ್ಲಿ ಕೆಲವು ವಿಚಾರಗಳು ಬರುತ್ತವೆ, ಹೋಗುತ್ತದೆ. ಇವೆಲ್ಲಾ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ಬಗ್ಗೆ ನನಗೆ ವಿಶ್ವಾಸವಿದೆ. ಅವರು ಪಕ್ಷಕ್ಕೆ ಹಾನಿ ಮಾಡುವ ಆಲೋಚನೆ ಮಾಡಲ್ಲ. ಸಮ್ಮಿಶ್ರ ಸರಕಾರಕ್ಕೆ ಏನೂ ಆಗಲ್ಲ. ಸರಕಾರ ಸುಭದ್ರವಾಗಿದೆ. ಕಾಂಗ್ರೆಸ್ ಶಾಸಕರುಗಳ ಸಾಮೂಹಿಕ ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯರ ಸಲಹೆ ಸಹಕಾರದಿಂದ ಸರಕಾರ ನಡೆಯುತ್ತದೆ ಎಂದು ಹೇಳಿದರು.
ರಾಜೀನಾಮೆಗೆ ಮುಂದಾಗಿರುವುದು ಸಿದ್ದರಾಮಯ್ಯರ ಬೆಂಬಲಿಗರು ಎಂಬ ಮಾತು ಸುಳ್ಳು. ಕಾಂಗ್ರೆಸ್ನ ಎಲ್ಲಾ ಶಾಸಕರುಗಳಿಗೆ ಸಿದ್ದರಾಮಯ್ಯ ಸಿಎಲ್ಪಿ ನಾಯಕರು. ಸರ್ಕಾರ ವಿಫಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗುವ ಸೂಚನೆ ದೊರಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿ ಇರುವಾಗಲೇ ರಾಜ್ಯದಲ್ಲಿ ಭಾರಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿವೆ.