ಬೆಂಗಳೂರು, ಜು06(Daijiworld News/SS): ರಾಜಕೀಯ ಅಂಗಳದಲ್ಲಿ ಭರ್ಜರಿ ಚಟುವಟಿಕೆಗಳು ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಯಾವುದೇ ಸಮಯ ಬಿದ್ದು ಹೋಗುವ ಸ್ಥಿತಿಗೆ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಒಂದು ವೇಳೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರೆ, ಭಾರತೀಯ ಜನತಾ ಪಕ್ಷ ಸಿದ್ಧವಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿರುವ ಕುಲಗೆಟ್ಟ ಸರಕಾರದಿಂದ ಹೊರಬರಲು ಇದೇ ಸರಿಯಾದ ಸಮಯ ಎಂದು ರಾಜೀನಾಮೆ ನೀಡಿರುವ ಶಾಸಕರು ನಿರ್ಧರಿಸಿದ್ದಾರೆ ಮತ್ತು ಇಲ್ಲಿ ಮುಂದುವರಿಯುವುದು ಸಾಧ್ಯವೇ ಇಲ್ಲ ಎಂದು ಅಂದುಕೊಂಡ ಬಳಿಕ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಸಾಂವಿಧಾನಿಕವಾಗಿ ಮತ್ತು ರಾಜ್ಯದ ಪರವಾಗಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ರಾಜೀನಾಮೆ ಹಿಂದೆ ಯಾವುದೇ ಬಿಜೆಪಿ ಮುಖಂಡರು ಅಥವಾ ಶಾಸಕರ ಪಾತ್ರವಿಲ್ಲ. ಸ್ವಇಚ್ಚೆಯಿಂದ ಸ್ವೀಕರ್ ಬಳಿ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆದ್ದರಿಂದ ರಾಜೀನಾಮೆಗೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲಿ ಬಿಜೆಪಿಯ ಹಸ್ತಕ್ಷೇಪವಿಲ್ಲ ಎಂದು ಇದು ತೋರಿಸುತ್ತದೆ ಎಂದು ಹೇಳಿದರು.
ಈಗಾಗಲೇ ರಾಜಕೀಯ ಅಂಗಳದಲ್ಲಿ ಭರ್ಜರಿ ಚಟುವಟಿಕೆಗಳು ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಯಾವುದೇ ಸಮಯ ಬಿದ್ದುಹೋಗುವ ಸ್ಥಿತಿಗೆ ತಲುಪಿದೆ. ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಭಾರತೀಯ ಜನತಾ ಪಕ್ಷ, ಯಾವುದೇ ನಿರ್ಧಾರಕ್ಕೆ ಬರದೆ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ತಾವಾಗಿಯೇ ಸರಕಾರ ರಚಿಸುವ ಪ್ರಸ್ತಾವನೆ ಸಲ್ಲಿಸುವ ಬದಲು, ರಾಜ್ಯಪಾಲರಿಂದಲೇ ಆಹ್ವಾನ ಬಂದರೆ ಸ್ವೀಕರಿಸಿ ಸರಕಾರ ಸಚಿಸುವ ನಿರ್ಧಾರಕ್ಕೆ ಬಂದಿದೆ. ಸಾಂವಿಧಾನಿಕವಾಗಿ ಅವರು ಭಾರತೀಯ ಜನತಾ ಪಕ್ಷಕ್ಕೆ ಆಹ್ವಾನ ನೀಡಿದರೆ ಸರಕಾರ ರಚಿಸಲು ಬಿಜೆಪಿ ಸಿದ್ಧ ಎಂದು ಹೇಳಿದರು.