ಬೆಂಗಳೂರು, ಜು 07 (Daijiworld News/MSP): ಆರ್. ಆರ್. ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಸ್ಪೀಕರ್ ಕಚೇರಿಗೆ ರಾಜೀನಾಮೆ ನೀಡಲು ಬಂದಾಗ ದಿಢೀರ್ ಬೆಳವಣಿಗೆಗಳಿಂದ ಕಂಗಾಲಾಗಿ ಅಲ್ಲಿಗೆ ಆಗಮಿಸಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಶಾಸಕ ಮುನಿರತ್ನರ ರಾಜೀನಾಮೆ ಪತ್ರವನ್ನು ಅವರ ಕೈಯಿಂದ ಕಿತ್ತುಕೊಂಡು ಹರಿದು ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿ.ಕೆ ಶಿವಕುಮಾರ್ ಅವರು, ಹೌದು ನಾನು ರಾಜೀನಾಮೆ ಪತ್ರ ಮುನಿರತ್ನ ಅವರ ಕೈಯಿಂದ ಕಿತ್ತುಕೊಂಡು ಕಿತ್ತುಹಾಕಿದ್ದು ನಿಜ ಅದಕ್ಕೆ ಏನೀವಾಗ ? ಎಂದು ಪ್ರಶ್ನಿಸಿದ್ದಾರೆ.
ನನ್ನ ಪಕ್ಷವನ್ನು ಮತ್ತು ಪಕ್ಷದ ಶಾಸಕರನ್ನು ರಕ್ಷಿಸುವ ಅನಿವಾರ್ಯತೆ ನನಗಿತ್ತು. ಕೆಲವೊಮ್ಮೆ ಅವರು ತಪ್ಪು ನಿರ್ಧಾರ ಕೈಗೊಂಡಾಗ ಅದನ್ನು ತಿದ್ದುವ ಹಕ್ಕು ನನಗಿದೆ. ಈ ಕಾರಣಕ್ಕೆ ರಾಜೀನಾಮೆ ಪತ್ರವನ್ನು ನಾನು ಹರಿದುಹಾಕಿದ್ದು. ಒಂದು ವೇಳೆ ರಾಜೀನಾಮೆ ಪತ್ರ ಹರಿದು ಹಾಕಿದ್ದಕ್ಕೆ ನನ್ನ ಸ್ನೇಹಿತ ಶಾಸಕ ಮುನಿರತ್ನ ಅವರು ನನ್ನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಯೋಚಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಸ್ವೀಕರ್ ಕಚೇರಿಯಲ್ಲಿ ಶಾಸಕ ಮುನಿರತ್ನ ಅವರು ಡಿಕೆಶಿ ನಡೆಯಿಂದ ಸ್ವಲ್ಪ ಕಾಲ ಗೊಂದಲಕ್ಕೀಡಾಗಿ ಏನು ಮಾಡಲು ತೋಚದೆ ಸುಮ್ಮನಾಗಿದ್ದರು. ಆ ನಂತರ ಎರಡನೇ ಬಾರಿಗೆ ಮತ್ತೆ ಬಂದು ರಾಜಿನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಿದರು.