ಮುಂಬೈ, ಜು 07 (Daijiworld News/MSP): "ನಾನು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ" ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಹಿರಂಗಪಡಿಸಿದ್ದಾರೆ.
ಸದ್ಯಕ್ಕೆ ಮುಂಬೈಗೆ ಶಿಫ್ಟ್ ಆಗಿ ಹೋಟೆಲ್ನಲ್ಲಿ ಉಳಿದುಕೊಂಡಿರುವ ಅವರು ದೂರವಾಣಿ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ದೂರವಾಣಿ ಮೂಲಕ ಮಾತನಾಡುತ್ತಾ ಮೈತ್ರಿ ಸರ್ಕಾರದ ಹಾಗೂ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರತಾಪ್ ಗೌಡ ಪಾಟೀಲ್,ಮೈತ್ರಿ ಸರ್ಕಾರ ಅಭಿವೃದ್ದಿ ಕೆಲಸವನ್ನು ಮಾಡಲಿಲ್ಲ. ಬರಿ ಕಚ್ಚಾಡೋದ್ರಲ್ಲೇ ಸಮಯ ವ್ಯರ್ಥ ಮಾಡಿದರು. ಇನ್ನು ಪಕ್ಷದಲ್ಲಿ ಹಿರಿತಲೆಗಳಿಗೆ ಗೌರವ ನೀಡಲಿಲ್ಲ. ಶಾಸಕನಾಗಿ ನಾನು ಮೂರು ಬಾರಿ ಆಯ್ಕೆ ಆದರೂ ಸಚಿವನನ್ನಾಗಿ ಮಾಡಲಿಲ್ಲ. ಇದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.
ನನಗಂತು ಬಿಜೆಪಿಗೆ ಸೇರುವ ಇಚ್ಚೆ ಇದೆ. ಉಳಿದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಬಹುತೇಕ ರಾಜೀನಾಮೆ ನೀಡಿದವರೆಲ್ಲ ಬಿಜೆಪಿಗೆ ಸೇರಬಹುದು ಎಂಬುವುದು ನನ್ನ ಅನಿಸಿಕೆ ಎಂದಿದ್ದಾರೆ. ಇದೇ ಸಂದರ್ಭ ನೀಡಿದ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯೋಲ್ಲ. ನನ್ನ ನಿರ್ಧಾರ ಅಚಲ ಎಂದಿದ್ದಾರೆ.