ಬೆಂಗಳೂರು, ಜು 07 (Daijiworld News/MSP): ಮೈತ್ರಿ ಸರ್ಕಾರ ಪತನಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಈಗಾಗಲೇ 14 ಜನ ಅತೃಪ್ತ ಶಾಸಕರು ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಇದರೊಂದಿಗೆ ಮತ್ತಷ್ಟು ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಈ ಪೈಕಿ ,ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಎಚ್ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮತ್ತು ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಅವರ ಹೆಸರು ರಾಜೀನಾಮೆ ನೀಡುವ ಪಟ್ಟಿಯಲ್ಲಿ ಮೂಂಚೂಣಿಯಲ್ಲಿದೆ.
ಶನಿವಾರವಷ್ಟೇ, ಕಾಂಗ್ರೆಸ್ ನ ಒಂಬತ್ತು ಹಾಗೂ ಜೆಡಿಎಸ್ ನ ಮೂವರು ರಾಜೀನಾಮೆ ಸಲ್ಲಿಸಿದ್ದರು. ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಪ್ರತಾಪ್ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಎಚ್. ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ರಾಮಲಿಂಗಾರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಮತ್ತು ಆನಂದ ಸಿಂಗ್ ಅವರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ಆ ಬಳಿಕ ರಾಜ್ಯಪಾರನ್ನು ಭೇಟಿಯಾಗಿ ಸಂಜೆ 6.35ಕ್ಕೆ ಎಚ್ಎಎಲ್ನಿಂದ ವಿಮಾನದ ಮೂಲಕ ಮುಂಬೈಗೆ ಶಿಫ್ಟ್ ಆಗಿದ್ದರು. ಇವರಲ್ಲಿ ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಅವರು ಮುಂಬೈಗೆ ಹೋಗದೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಂದ ಸರ್ಕಾರ ಡೋಲಾಯಮಾನ ಸ್ಥಿತಿಯಲ್ಲಿದ್ದು, ಸರ್ಕಾರ ಉಳಿಯುವ ಅಥವಾ ಬೀಳುವ ನಿರ್ಧಾರ ಇನ್ನೇನಿದ್ದರೂ ಸ್ಪೀಕರ್ ಕೈಯಲ್ಲಿದೆ.