ಬೆಂಗಳೂರು, ಜು 07 (Daijiworld News/MSP): ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ದೋಸ್ತಿ ಸರಕಾರದ ಮೇಲೆ " ರಾಜೀನಾಮೆಯ ಅಸ್ತ್ರ " ಪ್ರಯೋಗಿಸಿರುವ 13 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮೈತ್ರಿ ಸರ್ಕಾರದ ಉಳಿವಿಗೆ ಸಂಚಕಾರ ತಂದೊಡ್ಡಿದ್ದಾರೆ. ಅತೃಪ್ತ ಶಾಸಕರು ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರ ಮನವೊಲಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿಕೆಶಿ ಪ್ರಯತ್ನಿಸಿದದಾರೂ ಇದ್ಯಾವುದು ಫಲ ನೀಡಲಿಲ್ಲ.
ಈ ನಡುವೆ ರಾಜೀನಾಮೆ ಪರ್ವಕ್ಕೆ ಕಾಂಗ್ರೆಸ್ಸಿಗರು ಇದು " ಆಪರೇಷನ್ ಕಮಲ" ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ನ " ಮೊಹಮ್ಮದ್ ಬಿನ್ ತೊಘಲಕ್ ನಂತರ, ಈ ಭಾರತವನ್ನು ಆಳುತ್ತಿರುವ ಅದೇ ಗುಣಗಳುಳ್ಳ ವ್ಯಕ್ತಿ, ನರೇಂದ್ರ ಮೋದಿ! ಇವರು ನೈತಿಕತೆ ಮತ್ತು ಮೌಲ್ಯ ಹೀನ ರಾಜಕಾರಣಿ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು 10 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಕರ್ನಾಟಕವು ಮೋದಿಯ ಸಂಚಿಗೆ ಬಲಿಯಾಗಬಾರದು " ಎಂದು ತನ್ನ ಆಕ್ರೋಶವನ್ನು ಟ್ವೀಟ್ ಮೂಲಕ ಕಾಂಗ್ರೆಸ್ ತೊಡಿಕೊಂಡಿದೆ.
ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯದ ಬೆಳವಣಿಗೆಗೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ದ ಕಿಡಿಕಾರಿದ್ದು, ಕರ್ನಾಟಕ ಮಾತ್ರವಲ್ಲದೇ ಸುಮಾರು 13-14 ರಾಜ್ಯಗಳಲ್ಲಿ ಬಿಜೆಪಿಯೇತರ ಶಾಸಕರನ್ನು ಅವರಿದ್ದ ಪಕ್ಷದಿಂದ ತೊರೆಯುವಂತೆ ಮಾಡಿದ್ದಾರೆ. ಜನ ಆಯ್ಕೆ ಮಾಡಿದ ಸರ್ಕಾರ ಅಸ್ಥಿರತೆಗೊಳಿಸಿ ಅಲ್ಲಿನ ಶಾಸಕರನ್ನು ಬೆದರಿಸಿ, ಹೆದರಿಸುವ ಕೆಲಸವನ್ನು ಕೇಂದ್ರ ಸರ್ಕಾರದ ಹಾಗೂ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.