ಬೆಂಗಳೂರು, ಜು 07 (Daijiworld News/MSP): ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಸಲ್ಲಿಸಿ ಮುಂಬೈಗೆ ಶಿಫ್ಟ್ ಆಗಿರುವ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ತಮ್ಮ ರಾಜೀನಾಮೆಗೆ ಕಾರಣವೇನು ಎಂದು ಹೊರಗೆಡವಿದ್ದಾರೆ. " ದೇವೇಗೌಡರ ಇಡೀ ಕುಟುಂಬ ನನ್ನನ್ನು ಟಾರ್ಗೆಟ್ ಮಾಡಿದ್ದು ಮಾತ್ರವಲ್ಲದೇ ಅವರ ಕುಟುಂಬದ ಹೆಣ್ಣು ಮಕ್ಕಳು ನನ್ನನ್ನೇ ಟಾರ್ಗೆಟ್ ಮಾಡಿದರು. ಅದರಲ್ಲೂ ಜೆಡಿಎಸ್ ವರಿಷ್ಠ ದೇವೇಗೌಡರ ಮಗಳು ಅನಸೂಯಾ, ಅವರು ನನ್ನನ್ನು ಅವರ ಮನೆಗೆ ಕರೆದಾಗ ಚಪ್ಪಲಿ ಬಿಡುವಲ್ಲಿ ನನ್ನನ್ನು ನಿಲ್ಲಿಸುತ್ತಿದ್ದರು ಎಂದು ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ.
ಮುಂಬೈಯಿಂದ ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಈ ವಿಚಾರಗಳನ್ನು ಹೊರಗೆಡವಿದ್ದಾರೆ. ಇದರೊಂದಿಗೆ ನನ್ನ ಕ್ಷೇತ್ರ ಕೆ.ಆರ್ ಪೇಟೆಯ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ದೇವೇಗೌಡ ಕುಟುಂಬ ಹಸ್ತಕ್ಷೇಪ ಮಾಡುತ್ತಿದ್ದರು. ಇದು ನನಗೆ ತುಂಬಾ ನೋವು ನೀಡಿದೆ. ನಾನು ರಾಜೀನಾಮೆ ನೀಡಲು ಇದೂ ಒಂದು ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೇನೆ, ಸಾಕಷ್ಟು ಅನುಭವ ಹೊಂದಿದ್ದೇನೆ. ಪಕ್ಷಕ್ಕಾಗಿ ದುಡಿದ್ದಿದ್ದೇನೆ. ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡರು ಗಣನೆಗೆ ತೆಗೆದುಕೊಂಡಿಲ್ಲ. ಮಾತ್ರವಲ್ಲ ಪಕ್ಷವೂ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಕೊನೆಗೆ ಯಾವುದೋ ಚೇರ್ಮನ್ ಹುದ್ದೆ ಕೊಡುತ್ತೇನೆ ಎಂದರು, ಆದರೆ ಅದಕ್ಕೂ ದೇವೇಗೌಡ ಅವರ ಮನೆಯ ಹೆಣ್ಣು ಮಕ್ಕಳು ಕಲ್ಲು ಹಾಕಿದ್ರೂ ಎಂದು ಅವರು ಅಸಮಾಧಾನ ಹೊರಹಾಕಿದರು.