ಬೆಂಗಳೂರು, ಜು 07 (Daijiworld News/MSP): ಅಮೇರಿಕಾದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ವಾಪಾಸಾಗಿ ದೆಹಲಿ ತಲುಪಿದ್ದು, ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ನಾಳೆ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಸರ್ಕಾರ ಉಳಿಸಲು ಕಸರತ್ತು ನಡೆಸುತ್ತಾರಾ ? ಅಥವಾ ಮೈತ್ರಿ ಜಂಜಾಟವೇ ಸಾಕು ಎಂದು ರಾಜೀನಾಮೆ ನೀಡುತ್ತಾರೋ ? ಎನ್ನುವ ಕುತೂಹಲ ನೆಟ್ಟಿದೆ.
ಶನಿವಾರವಷ್ಟೇ ಜೆಡಿಎಸ್-ಕಾಂಗ್ರೆಸ್ನ 13 ಶಾಸಕರು ರಾಜೀನಾಮೆ ನೀಡಿ ಮುಂಬೈನ ಹೊಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನೊಂದೆಡೆ ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಸಚಿವ ಎಚ್.ಡಿ ರೇವಣ್ಣ ಅವರ ಉಪಸ್ಥಿತಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಎಂದು ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆ ಸಂದರ್ಭ ಅಸಮಾಧಾನಗೊಂಡ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಸಿದ್ದರಾಮಯ್ಯ ಅವರಿದ್ದಾರೆ" ಎಂದು ಆರೋಪಿಸಿದ್ದಾರೆ.
ನೀವೆ ಹೇಳಿದಂತೆ ಹಾಗೂ ಒಪ್ಪಂದದ ಪ್ರಕಾರ ಐದು ವರ್ಷ ಜೆಡಿಎಸ್ಗೆ ಸಿಎಂ ಅಧಿಕಾರ ನೀಡಿದರೆ ಮಾತ್ರ ನಾವು ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ನಾವು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಳ್ಳಬೇಕಾಗುತ್ತದೆ. ಸರ್ಕಾರ ಉಳಿಯಬೇಕಾ? ಅಥವಾ ಉರುಳಬೇಕಾ ಎನ್ನುವುದನ್ನು ಕಾಂಗ್ರೆಸ್ಸಿಗರೇ ನಿರ್ಧಾರ ಮಾಡಲಿ. ನಿಮ್ಮ ನಾಯಕರ ಜೊತೆ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳಿ. ನಿಮ್ಮ ಶಾಸಕರನ್ನು ಸರಿಯಾದ ಹಾದಿಗೆ ತರುವುದು ನಿಮಗೆ ಬಿಟ್ಟ ವಿಚಾರ. ಇಲ್ಲವಾದರೆ ಸಿಎಂ ಕುಮಾರಸ್ವಾಮಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂದು ಡಿಕೆಶಿ ಅವರ ಮೂಲಕ ಕಾಂಗ್ರೆಸ್ಸಿಗರಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.