ಬೆಂಗಳೂರು, ಜು 07 (DaijiworldNews/SM): ರಾಜ್ಯದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಯಾವುದೇ ತೀರ್ಮಾನ ಕೈಗೊಂಡರೂ ಸರಿಯೇ. ಹಾಗಂತ ಅಧಿಕಾರದಲ್ಲಿರುವ ಸಿಎಂ ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೇವೇಗೌಡ ಅವರ ಭೇಟಿ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರೇ ಐದು ವರ್ಷ ಸಿಎಂ ಆಗಿರಬೇಕು ಎಂದು ನಾವು ಮಾತು ನೀಡಿದ್ದೇವೆ. ಆದುದರಿಂದ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಯಾವುದೇ ಪ್ರಮೇಯ ಇಲ್ಲ ಎಂದಿದ್ದಾರೆ.
ದೋಸ್ತಿ ಸರಕಾರಕ್ಕೆ ಆಗಿರುವ ಸಮಸ್ಯೆಗೆ ಈಗಾಗಲೇ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಎಲ್ಲರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು. ಈಗಾಗಲೇ ಹಲವು ಸಭೆಗಳನ್ನು ಮಾಡಿದ್ದೇವೆ. ಎಲ್ಲಾ ವಿಚಾರಗಳು ಸರಿಹೋಗುತ್ತಿವೆ.
ಬಿಜೆಪಿಯವರು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಆದರೆ ಇದೀಗ ವರಸೆ ಬದಲಾಯಿಸಿದ್ದಾರೆ. ಅವಕಾಶ ಸಿಕ್ಕರೆ ಸರಕಾರ ರಚಿಸುತ್ತೇನೆ ಎನ್ನುತ್ತಿದ್ದಾರೆ. ಕೇಂದ್ರ ಬಿಜೆಪಿಯವರು ಮತ್ತೆ ಚುನಾವಣೆ ಎನ್ನುತ್ತಿದ್ದು, ಬಿಜೆಪಿಯವರೂ ಕೂಡ ಸರಕಾರ ಬೀಳುವುದಕ್ಕೆ ಕನಸು ಕಾಣುತ್ತಿದ್ದಾರೆ ಎಂದರು.