ಬೆಂಗಳೂರು, ಜು 07 (DaijiworldNews/SM): ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿದ್ಯಾಮಾನಗಳು ನಡೆದ ಬಳಿಕ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರು ಇಂದು ಸಂಜೆ 6:30 ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಎಂಟು ದಿನಗಳ ದೀರ್ಘ ಪ್ರವಾಸದ ಬಳಿಕ ಇಂದು ವಾಪಸ್ಸಾಗಿದ್ದಾರೆ. ಇಂದು ಸಂಜೆ ವೇಳೆಗೆ ದೆಹಲಿಗೆ ಬಂದಿಳಿದ ಕುಮಾರಸ್ವಾಮಿ ಅವರು, ವಿಶೇಷ ವಿಮಾನದಲ್ಲಿ ತುರ್ತಾಗಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಿಎಂ ವಿದೇಶಿ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿದೆ.
ಬೆಂಗಳೂರಿಗೆ ಬಂದ ಕೂಡಲೇ ರಾಜಕೀಯವಾಗಿ ಸಕ್ರಿಯರಾಗಿರುವ ಕುಮಾರಸ್ವಾಮಿ, ತಾಜ್ ವೆಸ್ಟ್ ಎಂಡ್ ಹೊಟೆಲ್ನಲ್ಲಿ ಆಯೋಜಿಸಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 18 ಗಂಟೆ ವಿಮಾನ ಯಾನ ಮಾಡಿರುವ ಕುಮಾರಸ್ವಾಮಿ ಅವರು, ಬಂದ ಕೂಡಲೇ ಯಾವುದೇ ವಿಶ್ರಾಂತಿಯ ಮೊರೆ ಹೋಗದೇ ನೇರವಾಗಿ ಸರ್ಕಾರವನ್ನು ಭದ್ರಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಸಂಪುಟ ಸಭೆ ಕರೆದಿರುವ ಕುಮಾರಸ್ವಾಮಿ ಇಂದು ಜೆಡಿಎಸ್ ಶಾಸಕಕಾಂಗ ಸಭೆ ಮುಗಿಸಿ ತಮ್ಮ ಪಕ್ಷದ ಶಾಸಕರನ್ನು ಭದ್ರಗೊಳಿಸುವ ಕುರಿತಂತೆ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರದಂತೆ ಮತ್ತಷ್ಟು ಘಟನಾವಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಎಲ್ಲವನ್ನು ಸಮರ್ಥವಾಗಿ ಎದುರಿಸಲು ಸಿಎಂ ಸನ್ನದ್ದರಾಗಿದ್ದಾರೆ.