ಮುಂಬೈ, ಜು 07 (DaijiworldNews/SM):ನಾವು ಹದಿಮೂರು ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ. ಹಾಗೂ ಕಾಂಗ್ರೆಸ್ ನ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮುಂಬೈನ ಸೋಫಿಟೆಲ್ ಹೋಟೆಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಆಷ್ಟೂ ಶಾಸಕರು ವಿಧಾನಸಭಾ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿ ಬಂದಿದ್ದೇವೆ. ಅದನ್ನೇ ರಾಜ್ಯಪಾಲರಿಗೂ ತಿಳಿಸಿದ್ದೇವೆ. ಈಗ ನಾವು ಹತ್ತು ಶಾಸಕರು ಇಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಮೂವರು ಶಾಸಕರು ನಮ್ಮ ಜತೆಗೆ ಸೇರಿಕೊಳ್ಳಲಿದ್ದಾರೆ ಎಂದರು.
ನಾವೆಲ್ಲರೂ ನಮ್ಮ ನಿರ್ಧಾರದಲ್ಲಿ ಬದ್ಧರಾಗಿದ್ದೇವೆ ಯಾವುದೇ ಕಾರಣಕ್ಕೂ ಯಾರೂ ಕೂಡ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ. ನಮ್ಮ ಮಾತು ಅಚಲ ಎಂದು ಹೇಳಿದ್ದಾರೆ.