ಲಖನೌ, ಜು08(Daijiworld News/SS): ಇಲ್ಲಿನ ಯುಮುನಾ ಎಕ್ಸ್ಪ್ರೆಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಸ್ಕಿಡ್ ಆದ ಪರಿಣಾಮ ರಸ್ತೆ ನಡುವಿನ ಸೇತುವೆಯಿಂದ ಬಹುದೊಡ್ಡ ಚರಂಡಿಗೆ ಬಿದ್ದು ಸುಮಾರು 29 ಮಂದಿ ಸಾವಿಗೀಡಾಗಿ, 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ನಡೆದಿದೆ.
165 ಕಿ.ಮೀ. ಇರುವ ಯಮುನಾ ಎಕ್ಸ್ಪ್ರೆಸ್ ವೇ ಗ್ರೇಟರ್ ನೋಯ್ಡಾದಿಂದ ಉತ್ತರ ಪ್ರದೇಶದ ಆಗ್ರಾವನ್ನು ಸಂಪರ್ಕಿಸುತ್ತದೆ. ಸುಮಾರು 46 ಪ್ರಯಾಣಿಕರನ್ನು ಹೊತ್ತು ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ದೆಹಲಿಗೆ ತೆರಳುತ್ತಿದ್ದ ಬಸ್ ರಸ್ತೆಯ ನಡುವೆ ಸ್ಕಿಡ್ ಆಗಿ ಸೇತುವೆಯಿಂದ ಸುಮಾರು 40 ಅಡಿ ಆಳವಿರುವ ಚರಂಡಿಗೆ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯುಪಿ ಪೊಲೀಸರು ಈ ಕುರಿತು ಮಾಹಿತಿ ಖಚಿತಪಡಿಸಿದ್ದಾರೆ.
ಮೂಲಗಳ ಪ್ರಕಾರ ಒನ್ ಸ್ಲೀಪರ್ ಕೋಚ್ ಬಸ್ ಆಗಿದ್ದು, ದುರಂತ ಸಂಭವಿಸುವ ಮುನ್ನ ಚಾಲಕ ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಚರಂಡಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಆಗ್ರಾ ಸಮೀಪದಲ್ಲೇ ಈ ದುರ್ಘಟನೆ ಸಂಭವಿಸಿದೆ.
ಚರಂಡಿಗೆ ಬಿದ್ದಿರುವುದರಿಂದ ಬಸ್ನ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬಸ್ನ ಮೇಲ್ಭಾಗದ ಕಬ್ಬಿಣದ ಬಿಡಿ ಭಾಗಗಳನ್ನು ಸರಿಸಿ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಚರಂಡಿಯಾಗಿರುವುದರಿಂದ ರಕ್ಷಣ ಕಾರ್ಯಾಚರಣೆಗೆ ತೊಡಕಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಗಾಯಗೊಂಡವರಿಗೆ ಹಾಗೂ ಸಾವಿಗೀಡಾದ ಕುಟುಂಬದವರಿಗೆ ಸಹಾಯಾಸ್ತ ನೀಡಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.